×
Ad

ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಅವ್ಯವಸ್ಥೆಗಳಿಲ್ಲ : ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮೋಹನ್

Update: 2021-04-24 15:10 IST
ಡಾ. ಮೋಹನ್

ಮಡಿಕೇರಿ : ಶುಕ್ರವಾರ ಕೋವಿಡ್ ಸೋಂಕಿತರೊಬ್ಬರು ಮಡಿಕೇರಿ ಕೋವಿಡ್ ಆಸ್ಪತ್ರೆಯ ಅವ್ಯವಸ್ಥೆ ಎಂದು ವಿಡಿಯೋ ಮಾಡಿ ವೈರಲ್ ಮಾಡಿದ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರು ಸ್ಪಷ್ಟೀಕರಣ ನೀಡಿದ್ದಾರೆ.

ಕೋವಿಡ್ ಪರೀಕ್ಷೆಗೆಂದು ಬಂದವರನ್ನು ಒಂದು ವಾರ್ಡ್ ನಲ್ಲಿ ಕೂರಿಸಲಾಗುತ್ತದೆ. ಹೀಗೆ ಒಂದೊಂದು ಹಾಸಿಗೆ ಮೇಲೆ 2-3 ಮಂದಿ ಕುಳಿತ್ತಿದ್ದಾರೆಯೇ ಹೊರತು ಸೋಂಕಿತರು ಎಂದು ದೃಢಪಟ್ಟ ನಂತರ ಹಾಸಿಗೆಯಲ್ಲಿ ಕುಳಿತವರಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ಕೋವಿಡ್ ಪರೀಕ್ಷೆಗೆ ಬಂದವರನ್ನು ಒಂದು ಕಡೆ ಕೂರಿಸಲಾಗುತ್ತದೆ, ಸೋಂಕು ಪಾಸಿಟಿವ್ ಆಗಿದ್ದಲ್ಲಿ ಸೋಂಕಿತರಿಗೆ ಪ್ರತ್ಯೇಕ ವಾರ್ಡ್ ನಲ್ಲಿ ಹಾಸಿಗೆ ನೀಡಲಾಗುತ್ತದೆ. ಸಣ್ಣಪುಟ್ಟ ನ್ಯೂನತೆಗಳು ಆಗಿದ್ದಲ್ಲಿ ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲಿ ಸುಸಜ್ಜಿತವಾದ 56 ಬೆಡ್‌ಗಳ ತೀವ್ರ ನಿಗಾ ಘಟಕ ಕಾರ್ಯ ನಿರ್ವಹಿಸುತ್ತದೆ. ಇಲ್ಲಿ ಮಕ್ಕಳ ಮತ್ತು ನವಜಾತ ಶಿಶುಗಳಿಗೆ ವಿಶೇಷ ಸೌಲಭ್ಯವಿದೆ. ಕೋವಿಡ್ ರೋಗಿಗಳಿಗೆ ಡಯಾಲಿಸಿಸ್‌ಗೆ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 32 ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿದೆ.

13 ಕೆ.ಎಲ್ ಆಮ್ಲಜನಕ ಘಟಕ ಸ್ಥಾಪಿಸಲಾಗಿದ್ದು ಅಕ್ಟೋಬರ್ 10 2020 ರಿಂದ  ಕಾರ್ಯ ನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ ಒಂದು ಖಾಸಗಿ ಆಸ್ಪತ್ರೆಯನ್ನು ವಿಪತ್ತು ನಿರ್ವಹಣೆ ಕಾಯ್ದೆಯನ್ವಯ ಹಸ್ತಾಂತರ ಪಡೆದುಕೊಂಡಿದ್ದು ಸಾರ್ವಜನಿಕರಿಗೆ ನಾನ್ ಕೋವಿಡ್ ಸೇವೆಗಳನ್ನು ಒದಗಿಸಲಾಗುತ್ತದೆ.

ಜಿಲ್ಲೆಯಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹಾಗೂ ಮುಖಗವಸು ಧರಿಸದ ಸಾರ್ವಜನಿಕರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಸುದ್ದಿ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣ ಹೆಚ್ಚಾಗಿ ಕಂಡುಬರುತ್ತಿದ್ದು, ಈಗಿರುವ 3 ಸಿ.ಸಿ.ಸಿ (300 ಹಾಸಿಗೆಗಳ) ಜೊತೆಗೆ ಹೆಚ್ಚುವರಿಯಾಗಿ 3 ಸಿಸಿಸಿ (400 ಹಾಸಿಗೆಗಳ) ಒಟ್ಟು 700 ಹಾಸಿಗೆಗಳಿಗೆ ಹೆಚ್ಚಿಸಲು ಕ್ರಮ ವಹಿಸಲಾಗಿದೆ.

ಜಿಲ್ಲೆಯಲ್ಲಿ ಪ್ರತಿ ದಿನ ಕೋವಿಡ್ ಪರೀಕ್ಷೆಯ ಗುರಿ ಹೆಚ್ಚಿಸಲಾಗಿದ್ದು, ಪ್ರತಿ ದಿನ 900 ಆರ್‌ಟಿಪಿಸಿಆರ್ ಮತ್ತು 100 ಆರ್‌ಎಟಿ ರಂತೆ ಪ್ರತಿ ದಿನ ಒಟ್ಟು 1000 ಪರೀಕ್ಷೆ ಮಾಡಲು ಗುರಿಯನ್ನು ನಿಗಧಿಪಡಿಸಲಾಗಿದೆ. ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆ ನಡೆಸಲು ಒಟ್ಟು 9 ಸಂಚಾರಿ ತಂಡಗಳನ್ನು ರಚಿಸಲಾಗಿದ್ದು, ಗ್ರಾಮ ಮಟ್ಟದಲ್ಲಿ ಹಾಗೂ ವಾರ್ಡ್ ಮಟ್ಟದಲ್ಲಿ ಆರೋಗ್ಯ ತಪಾಸಣಾ ತಂಡಕ್ಕೆ ಸಹಕರಿಸುವ ನಿಟ್ಟಿನಲ್ಲಿ ಟಾಸ್ಕ್ಪೋರ್ಸ್ ರಚಿಸಲಾಗಿದೆ. ಆರೋಗ್ಯ ತಪಾಸಣಾ ತಂಡಕ್ಕೆ ಹೆಚ್ಚುವರಿಯಾಗಿ ಆಂಬ್ಯುಲೆನ್ಸ್ ಗಳು ಹಾಗೂ ಬಾಡಿಗೆ ಆಧಾರದಲ್ಲಿ ವಾಹನಗಳನ್ನು ಒದಗಿಸಲು ಕ್ರಮವಹಿಸಲಾಗಿದೆ ಎಂದು ಡಾ.ಮೋಹನ್ ಹೇಳಿದರು.

ಕೊಡಗು ವೈದ್ಯಕಿಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಕಾರ್ಯಪ್ಪ ಅವರು ಮಾತನಾಡಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 250 ಹಾಸಿಗೆ ಇದ್ದು, 150 ಆಕ್ಸಿಜನ್ ಬೆಡ್ ಇದೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News