×
Ad

ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನ: ಟ್ವಿಟರ್ ನಲ್ಲಿ 'ಆಕ್ಸಿಜನ್ ಬೆಡ್ ಲೆಕ್ಕ ಕೊಡಿ' ಅಭಿಯಾನ

Update: 2021-04-24 17:44 IST
ಸಾಂದರ್ಭಿಕ ಚಿತ್ರ

ರಾಜ್ಯದಲ್ಲಿ ಕೊರೋನ ಸೋಂಕಿನ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಹಾಸಿಗೆ, ಆಕ್ಸಿಜನ್ ಸಿಗದೆ ಸಾವನ್ನಪ್ಪುತ್ತಿರುವ ಪ್ರಕರಣಗಳೂ ವರದಿಯಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರಕಾರವು ಕೊರೋನ ನಿಯಂತ್ರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಟ್ವಿಟರ್ ಅಭಿಯಾನ ನಡೆಯುತ್ತಿದ್ದು, 'ಆಕ್ಸಿಜನ್ ಬೆಡ್ ಲೆಕ್ಕ ಕೊಡಿ', 'ಪ್ರತಿದಿನದ ವರದಿ ಕೊಡಿ' ಎಂದು ಸರಕಾರವನ್ನು ಒತ್ತಾಯಿಸಲಾಗುತ್ತಿದೆ.

ರಾಜ್ಯದಲ್ಲಿ ಆಕ್ಸಿಜನ್ ಬೆಡ್ ಹೆಚ್ಚಿಸಿ, 'ಒಕ್ಕೂಟ ಸರ್ಕಾರದಿಂದ ಆಕ್ಸಿಜನ್ ಪಾಲಿನ ಹಕ್ಕು ಪಡೆದಿದ್ದರ ಲೆಕ್ಕ ಕೊಡಿ’ ಮುಂತಾದ ಬೇಡಿಕೆಗಳನ್ನು ಇಟ್ಟು, #oxygenbedslekkakodi , #DemandEverydayReport, #Implement_Citizen’s_charter, #ModiOxygenDo ಹ್ಯಾಶ್‌ಟ್ಯಾಗ್‌ಗನ್ನು ಬಳಸಿ ಸಾವಿರಾರು ಮಂದಿ ಟ್ವೀಟ್ ಮಾಡಿದ್ದಾರೆ. ಟ್ವೀಟ್ ನಲ್ಲಿ ಪ್ರಧಾನಿ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ, ಆರೋಗ್ಯ ಸಚಿವ ಸುಧಾಕರ್‌‌ ಅವರನ್ನು ಟ್ಯಾಗ್‌ ಮಾಡಲಾಗುತ್ತಿದೆ.

'ಆಕ್ಸಿಜನ್ ಬೆಡ್ ಹೆಚ್ಚಿಸಿ. ಪ್ರತಿದಿನ ಎಷ್ಟು ಹೊಸ ಬೆಡ್ ವ್ಯವಸ್ಥೆ ಆಯಿತು ವರದಿ ಕೊಡಿ. ಬೆಂಗಳೂರಿನ ಸರ್ಕಾರಿ ಆರೋಗ್ಯ ವ್ಯವಸ್ಥೆ ಬಲಪಡಿಸಿ' ಎಂದು ಜಗದೀಶ್ ಕನ್ನಡಿಗ ಎಂಬವರು ಟ್ವೀಟ್ ಮಾಡಿದ್ದಾರೆ.

'ನಾನು ಬ್ರಿಟಿಷರ ಆಳ್ವಿಕೆ ನೋಡಿರಲಿಲ್ಲ ಓದಿದ್ದೇನೆ, ಕೇಳಿದ್ದೇನೆ. ಆದರೆ ಹಿಟ್ಲರ್ (BJP) ಸರ್ಕಾರ ಆಡಳಿತ ಬಂದ ಮೇಲೆ ನೋಡ್ತಾ ಇದ್ದೇನೆ. ಇದು ಪಕ್ಕಾ ತುಘಲಕ್ ಸರ್ಕಾರ. ಅದಕ್ಕೆ ತಬರನ ಕಥೆಯಲ್ಲಿ ತಬರ ಹೇಳ್ತಾನೆ, ಬ್ರಿಟೀಷ್ ಆಡಳಿತ ವೈಖರಿ ಚೆನ್ನಾಗಿತ್ತು ಎಂದು'' #DemandEverydayReport #oxygenbedslekkakodi #ModiMadeDisaster'' ಎಂದು ವಿಜಯನ್ ನಾಯ್ಕ್ ಎಂಬವರು ಟ್ವೀಟ್ ಮಾಡಿದ್ದಾರೆ.

ಕೋವಿಶೀಲ್ಡ್ ಲಸಿಕೆ ದರ ನೆರೆಯ ಬಾಂಗ್ಲಾದೇಶಕ್ಕಿಂತಲೂ ಭಾತರದಲ್ಲಿ ದುಪ್ಪಟ್ಟಿದೆ. ಲಸಿಕೆಯನ್ನು ಉಚಿತವಾಗಿ ನೀಡಿ. ಜನರಿಗೆ ಆಕ್ಸಿಜನ್ ಒದಗಿಸಿ ಎಂದು ಭುವನ್ ಕುಮಾರ್ ಎಂಬವರು ಮನವಿ ಮಾಡಿದ್ದಾರೆ.

ವ್ಯವಸ್ಥೆಯ ಅವ್ಯವಸ್ಥೆ. ಮಾದ್ಯಮಗಳ ಮುಂದೆ ಎಲ್ಲಾ ಚೆನ್ನಾಗಿದೆ ಎಂದು ಹೇಳಿದರೆ ಸಾಲದು. ಎಲ್ಲಿ ಏನಿದೆ ಏನಿಲ್ಲ ಅನ್ನೊದರ ಅಧಿಕೃತ ಮಾಹಿತಿ ಪ್ರತಿದಿನ ಸಿಗಲಿ #DemandEverydayReport ಎಂದು ರಮೇಶ್ ಚೀಮಚನಹಳ್ಳಿ ಎಂಬವರು ತಿಳಿಸಿದ್ದಾರೆ.

ಸರ್ಕಾರದ ನಿರ್ವಹಣೆ ಪಾರದರ್ಶಕತೆ ಇಂದ ಕೂಡಿದ್ದರೆ ಮಾತ್ರ ಜನರಿಗೆ ವಿಶ್ವಾಸ ಮೂಡುತ್ತದೆ. ಪ್ರತಿದಿನ ಸರಿಯಾದ ಆಕ್ಸಿಜನ್ ,ಬೆಡ್‌ಗಳ ಮಾಹಿತಿ ನೀಡಿ #DemandEverydayReport ಎಂದು ವಶು ಎಂಬವರು ಆಗ್ರಹಿಸಿದ್ದು, 'ಒಕ್ಕೂಟ ಸರ್ಕಾರದಿಂದ ಆಕ್ಸಿಜನ್ ಪಾಲಿನ ಹಕ್ಕು ಪಡೆದಿದ್ದರ ಲೆಕ್ಕ ಕೊಡಿ. ಸರ್ಕಾರಿ ಸಿಬ್ಬಂದಿ ಹೆಚ್ಚಿಸಿ. ಗುತ್ತಿಗೆ ನೌಕರರ ಮರೆಯಬೇಡಿ. ಯಾವ ಜಿಲ್ಲೆಯನ್ನೂ ಉಪೇಕ್ಷಿಸಬೇಡಿ. ಪ್ರತಿದಿನ ಎಷ್ಟು ಹೊಸ ಬೆಡ್ ವ್ಯವಸ್ಥೆ ಆಯಿತು ವರದಿ ಕೊಡಿ' ಎಂದು ಚೈತ್ರಾ ಎಂಬವರು ವಿನಂತಿಸಿದ್ದಾರೆ.

ರಾಜ್ಯದ ಪ್ರತಿಯೊಂದು ಪಾಲಿಕೆ, ನಗರಸಭೆ, ಪುರಸಭೆ, ಪಂಚಾಯತ್ ಸೇರಿದಂತೆ ಜನಪ್ರತಿನಿಧಿಗಳು ತುರ್ತು ಸಂದರ್ಭದಲ್ಲಿ ಯಾರನ್ನು ಸಂಪರ್ಕಿಸಬೇಕು ಎಂಬ ವಿವರಗಳನ್ನು ನೀಡಿ ಅತ್ಯಂತ ಸಮರ್ಥವಾಗಿ ಕಾರ್ಯನಿರ್ವಹಿಸಬೇಕು. #DemandEverydayReport ಎಂದು ಸಂತೋಷ್ ಎಂಬವರು ತಿಳಿಸಿದ್ದಾರೆ. ಯಾರಿಗೆ ಆಕ್ಸಿಜನ್ ಬೆಡ್ ಅಥವಾ ಐಸಿಯು ಬೆಡ್ ಅಗತ್ಯವಿದೆಯೋ ಅವರಿಗೇ ಆದ್ಯತೆಯ ಮೇರೆಗೆ ಸಿಗುವಂತೆ ಮತ್ತು ಈ ವಿಚಾರದಲ್ಲಿ ವಿಐಪಿ ಶಿಫಾರಸ್ಸುಗಳಿಗೆ ಮಣಿಯದಂತೆ ನಿಯಮಾವಳಿಗಳನ್ನು ರೂಪಿಸಿ ಅದರ ಉಸ್ತುವಾರಿಯನ್ನು ಕಟ್ಟುನಿಟ್ಟಾಗಿ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಸನ್ಮಾನ್ಯ ಮುಖ್ಯಮಂತ್ರಿಗಳೇ, ಕೇಂದ್ರದಿಂದ ಬರಬೇಕಿದ್ದ ನೆರೆ ಪರಿಹಾರ, ರಾಜ್ಯದ ಜಿಎಸ್ ಟಿ ಪಾಲನ್ನು ಕೇಳಿ ಪಡೆಯಲಿಲ್ಲ ನೀವು, ಈಗಲಾದರೂ ಆಮ್ಲಜನಕ ಪೂರೈಕೆಗೆ ಹಠಮಾಡಿ ರಾಜ್ಯದ ಜನರ ಪ್ರಾಣವನ್ನು ಉಳಿಸಿ!! ಎಂದು ವಿಜಯರಾಮ ಎಂಬವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News