ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ತಾಯಿ ಕೋವಿಡ್‍ಗೆ ಬಲಿ
ಚಿಕ್ಕಮಗಳೂರು, ಎ.24: ಭಾರತ ಅಂತರಾಷ್ಟ್ರೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಅವರ ತಾಯಿ ಚೆಲುವಾಂಬ(60) ಕೋವಿಡ್ 19ಗೆ ಬಲಿಯಾಗಿದ್ದಾರೆ.
ಕೆಲ ದಿನಗಳ ಹಿಂದೆ ವೇದಾ ಕೃಷ್ಣಮೂರ್ತಿ ಅವರ ತಾಯಿ ಚೆಲುವಾಂಬ, ತಂದೆ ಕೃಷ್ಣಮೂರ್ತಿ ಸೇರಿದಂತೆ ಅಣ್ಣ, ಅತ್ತಿಗೆ, ಅಕ್ಕ ಬೆಂಗಳೂರಿಗೆ ಹೋಗಿದ್ದರು. ಬೆಂಗಳೂರಿನಲ್ಲಿ ಕೋವಿಡ್ ಹೆಚ್ಚುತ್ತಿದ್ದಂತೆ ಎಲ್ಲರೂ ಕಡೂರಿಗೆ ಹಿಂದಿರುಗಿದ್ದರು. ಬೆಂಗಳೂರಿಗೆ ಹೋಗಿ ಬಂದಿದ್ದರಿಂದ ವೇದಾ ಕೃಷ್ಣಮೂರ್ತಿ ಕುಟುಂಬದ ಎಲ್ಲರೂ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ಪರೀಕ್ಷೆಯಲ್ಲಿ ತಾಯಿ ಚೆಲುವಾಂಬ ಸೇರಿದಂತೆ ಎಲ್ಲರಿಗೂ ಸೋಂಕು ಇರುವುದು ಪತ್ತೆಯಾಗಿತ್ತು.
ಸೋಂಕು ಪತ್ತೆಯಾಗುತ್ತಿದ್ದಂತೆ ವೇದಾ ಅವರ ತಾಯಿ ಚೆಲುವಾಂಬ, ತಂದೆ ಕೃಷ್ಣಮೂರ್ತಿ ಸೇರಿದಂತೆ ಅಣ್ಣ, ಅಕ್ಕ, ಅತ್ತಿಗೆ ಕಡೂರು ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪೈಕಿ ವೇದಾ ಅವರ ತಾಯಿ ಚೆಲುವಾಂಬರಿಗೆ ಉಸಿರಾಟದ ತೊಂದರೆ ತೀವ್ರವಾಗಿದ್ದು, ಕೆಲ ದಿನಗಳಿಂದ ಅವರನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಶುಕ್ರವಾರ ನಿಧನರಾಗಿದ್ದಾರೆಂದು ತಿಳಿದು ಬಂದಿದೆ.
ಚೆಲುವಾಂಬ ಅವರ ಅಂತ್ಯಕ್ರಿಯೆಯನ್ನು ಶುಕ್ರವಾರ ಸಂಜೆ ಸರಕಾರಿ ಸರಕಾರಿ ಮಾರ್ಗಸೂಚಿಯಂತೆ ನೆರವೇರಿಸಲಾಗಿದ್ದು, ಅಂತ್ಯಕ್ರಿಯೆಯಲ್ಲಿ ಕುಟುಂಬಸ್ಥರು ಯಾರೂ ಭಾಗಿಯಾಗಿರಲಿಲ್ಲ. ವೇದಾ ಅವರ ಅಣ್ಣ, ಅತ್ತಿಗೆ, ಅಕ್ಕ ಅವರು ಕಡೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲರೂ ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ.
ವೇದಾ ಅವರು ಕೆಲ ದಿನಗಳಿಂದ ಕುಟುಂಬದ ಜೊತೆಗೆ ಇರದ ಪರಿಣಾಮ ಅವರಿಗೆ ಸೋಂಕು ತಗಲಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಉಮೇಶ್ ತಿಳಿಸಿದ್ದಾರೆ.