ಕೋವಿಡ್ ನಿಯಂತ್ರಣಕ್ಕೆ 'ವಾರಾಂತ್ಯದ ಕರ್ಫ್ಯೂ': ರಾಜ್ಯದ ಬಹುತೇಕ ಜಿಲ್ಲೆಗಳು ಸ್ತಬ್ಧ
ಬೆಂಗಳೂರು, ಎ.24: ಉಲ್ಬಣಗೊಂಡಿರುವ ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರಕಾರ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಿದ್ದು, ಇದರಿಂದಾಗಿ ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳು ಶನಿವಾರ ಸ್ತಬ್ಧಗೊಂಡಿದ್ದವು.
ಅಗತ್ಯ ಸೇವೆ ಹೊರತುಪಡಿಸಿ ಉಳಿದ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಶನಿವಾರ ಮುಂಜಾನೆ 6 ಗಂಟೆಯಿಂದ 10 ಗಂಟೆವರೆಗೆ ಮಾತ್ರ ಹಾಲು, ತರಕಾರಿ, ದಿನಸಿ ಪದಾರ್ಥಗಳನ್ನು ಖರೀದಿಸಲು ಅವಕಾಶ ನೀಡಲಾಗಿತ್ತು. ಆನಂತರ ಬಹುತೇಕ ಲಾಕ್‍ಡೌನ್ ವಾತಾವರಣ ಕಂಡುಬಂತು. ಖಾಸಗಿ ಬಸ್‍ಗಳ ಮಾಲಕರು ಸ್ವಯಂಪ್ರೇರಿತವಾಗಿ ಬಸ್ ಸಂಚಾರ ನಿಲ್ಲಿಸಿದ್ದರು.
ಮೈಸೂರು, ಬೆಳಗಾವಿ, ದಾವಣಗೆರೆ, ಶಿವಮೊಗ್ಗ, ಹಾಸನ, ಬೀದರ್, ಕಲಬುರ್ಗಿ, ಧಾರವಾಡ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಇದೇ ವಾತಾವರಣ ನಿರ್ಮಾಣವಾಗಿತ್ತು. ಇನ್ನು ಬೆಂಗಳೂರಿನ ಹೃದಯ ಭಾಗವಾಗಿರುವ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬೆರಳೆಣಿಕೆಯಷ್ಟು ಬಸ್‍ಗಳು ಸಂಚರಿಸುತ್ತಿದ್ದು, ಅಗತ್ಯ ಸೇವೆಗಷ್ಟೇ ಬಿಎಂಟಿಸಿ ಬಸ್‍ಗಳನ್ನು ಮೀಸಲಿಡಲಾಗಿತ್ತು.
ಕೆಎಸ್ಸಾರ್ಟಿಸಿ ಬಸ್‍ಗಳಲ್ಲಿ ಪ್ರಯಾಣಿಕರ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಬಸ್‍ಗಳ ಸಂಖ್ಯೆ ಕಡಿಮೆಯಲ್ಲಿ ಕಂಡವು. ಆಟೊರಿಕ್ಷಾಗಳ ಓಡಾಟವೂ ವಿರಳವಾಗಿತ್ತು. ಮಧ್ಯಾಹ್ನದ ವೇಳೆಗೆ ಬಹುತೇಕ ಮುಖ್ಯ ರಸ್ತೆಗಳು ಹಾಗೂ ವೃತ್ತಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.
ಉಲ್ಲಂಘಿಸಿದವರ ವಿರುದ್ಧ ಕ್ರಮ: ಆಸ್ಪತ್ರೆ, ಮೆಡಿಕಲ್ ಸ್ಟೋರ್ ಮೊದಲಾದ ಅವಶ್ಯ ಕೆಲಸಕ್ಕೆ ಹೋಗುವವರಿಗೆ ಮಾತ್ರವೇ ಪೊಲೀಸರು ಅವಕಾಶ ನೀಡಿದರು. ಅನವಶ್ಯವಾಗಿ ದ್ಚಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದವರಿಗೆ ಕೆಲ ಕಡೆ ಲಾಠಿ ಏಟು ಕೊಟ್ಟು ಬಿಸಿ ಮುಟ್ಟಿಸಿದ ಘಟನೆಗಳು ವರದಿಯಾಗಿವೆ.
ಅಲ್ಲಲ್ಲಿ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ನಿಯಮ ಉಲ್ಲಂಘಿಸಿದ್ದಕ್ಕೆ ಕೆಲವೆಡೆ ಎಫ್‍ಐಆರ್ ಕೂಡ ದಾಖಲಿಸಲಾಗಿದೆ. ಜನರು ಮನೆಗಳಿಂದ ಹೊರಬರಲು ಮುಂದಾಗದೆ ಕರ್ಫ್ಯೂ ಯಶಸ್ಸಿಗೆ ಸ್ವಯಂಪ್ರೇರಿತವಾಗಿ ಸಹಕಾರ ನೀಡಿದರು.
ಮತ್ತೊಂದೆಡೆ ಅಲ್ಲಲ್ಲಿ ಕೆಲವು ಹೊಟೇಲ್‍ಗಳಷ್ಟೇ ತೆಗೆದಿದ್ದು, ಪಾರ್ಸೆಲ್‍ಗಷ್ಟೆ ಅವಕಾಶವಿತ್ತು. ಅಲ್ಲಲ್ಲಿ ಬೇಕರಿಗಳು ತೆರೆದಿದ್ದವು. ಸರಕಾರಿ ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಔಷಧಿ ಅಂಗಡಿಗಳು, ಪ್ರಯೋಗಾಲಯಗಳು, ಪೆಟ್ರೋಲ್ ಬಂಕ್‍ಗಳು ತೆರೆದಿದ್ದವು.
ಊರಿಗೆ ಹೊರಟ ಕಾರ್ಮಿಕರು
ವಾರಾಂತ್ಯ ಕರ್ಫ್ಯೂವಿನ ಮುನ್ನಾ ದಿನವಾದ ಶುಕ್ರವಾರ ರಾತ್ರಿ ಮತ್ತು ಶನಿವಾರ ಬೆಳಗ್ಗೆಯೂ ಬೆಂಗಳೂರಿನೆಲ್ಲೆಡೆ ವಿವಿಧ ಅಂಗಡಿಗಳು, ಮಾಲ್‍ಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ತಮ್ಮ ತಮ್ಮ ಊರಿನತ್ತ ಹೊರಟ ದೃಶ್ಯ ಕಂಡಿತು.
ಬಾಗಿಲು ಹಾಕಿದ ಹೊಟೇಲ್‍ಗಳು
ಹೊಟೇಲ್‍ಗಳಿಗೆ ಕೇವಲ ಪಾರ್ಸಲ್ ನೀಡಲು ಮಾತ್ರ ಅವಕಾಶ ಇದ್ದುದ್ದರಿಂದ ಹಲವೆಡೆ ಇರುವ ಹೊಟೇಲ್‍ಗಳು ಶನಿವಾರ ಕಾರ್ಯನಿರ್ವಹಿಸಲಿಲ್ಲ. ಶುಕ್ರವಾರವೇ ಪಾರ್ಸಲ್‍ಗಾಗಿ ಜನರು ಬರಲಿಲ್ಲ. ಇನ್ನು ಶನಿವಾರವೂ ಇದೇ ಕತೆಯಾಗುತ್ತದೆ ಎಂದು ಬಹುತೇಕ ಹೊಟೇಲ್ ಮಾಲಕರು ಹೇಳಿದರು.
ಕೆಲವೆಡೆ ಪಾರ್ಸಲ್ ರೂಪದಲ್ಲಿ ಶೇ.10ರಷ್ಟು ಮಾತ್ರ ಹೊಟೇಲ್ ವ್ಯವಹಾರ ಆಗುತ್ತದೆ. ಮತ್ತಷ್ಟು ಕಡೆ ಶೇ.5ರಷ್ಟು ಮಾತ್ರವೇ ಆಗುತ್ತದೆ. ಹಾಗಾಗಿ, ಶನಿವಾರ ಶೇ.50ರಷ್ಟು ಹೊಟೇಲ್‍ಗಳು ಮಾತ್ರ ತೆರೆದಿದ್ದವು.
ವಾರಾಂತ್ಯದ ಕರ್ಫ್ಯೂಗೆ ಜನರು ಸಹಕಾರ ಕೊಟ್ಟಿದ್ದಾರೆ: ಬೊಮ್ಮಾಯಿ
ಕೋವಿಡ್ ಎರಡನೆ ಅಲೆ ಹರಡುವಿಕೆ ತಟ್ಟೆಗಟ್ಟುವ ನಿಟ್ಟಿನಲ್ಲಿ ಜಾರಿಗೊಳಿಸಿರುವ ವಾರಾಂತ್ಯದ ಕರ್ಫ್ಯೂಗೆ ಜನರು ಸಹಕಾರ ಕೊಟ್ಟಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶನಿವಾರ ವಾರಾಂತ್ಯದ ಕರ್ಫ್ಯೂ ಜಾರಿ ಹಿನ್ನೆಲೆ ನಗರದ ವಿವಿಧೆಡೆ ಸಂಚರಿಸಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ತೀವ್ರತೆ ಕುರಿತು ಜನರು ಜವಾಬ್ದಾರಿ ಅರ್ಥ ಮಾಡಿಕೊಳ್ಳಬೇಕು. ಕೋವಿಡ್ ನಿಯಮ ಕಟ್ಟುನಿಟ್ಟಾಗಿ ಪಾಲಿಸಬೇಕು. ಅಲ್ಲದೆ, ಕಾನೂನು ಉಲ್ಲಂಘಿಸುವುದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಕೋವಿಡ್ ಬಗ್ಗೆ ಜನರಲ್ಲೂ ಅರಿವು ಮೂಡಿದೆ. ಪೊಲೀಸರು ಸಹ ಕರ್ತವ್ಯ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ. ವಾರಾಂತ್ಯ ಕರ್ಫ್ಯೂ ಯಶಸ್ವಿಯಾಗಿದೆ ಎಂದ ಅವರು, ಎಲ್ಲ ವಲಯದ ಎಡಿಜಿಪಿ, ಬೆಂಗಳೂರು ಆಯುಕ್ತರೊಂದಿಗೆ ಮಾಹಿತಿ ಪಡೆಯಲಾಗಿದ್ದು, ಕರ್ಫ್ಯೂ ವೇಳೆ ಅಂಥದ್ದೇನೂ ಸಮಸ್ಯೆ ಆಗಿಲ್ಲ ಎಂದರು.
ನಾಳೆ(ಎ.26) ಸಂಪುಟ ಸಭೆ ಇದೆ. ರಾಜ್ಯ ಸರಕಾರ ಲಸಿಕೆ ಖರೀದಿಗೆ ಹಣ ಬಿಡುಗಡೆ ಮಾಡಿದೆ. ಅಲ್ಲದೆ, ದೊಡ್ಡ ಪ್ರಮಾಣದಲ್ಲಿ ಸೋಂಕು ಹರಡಿದಾಗ ಕೆಲ ಸಮಸ್ಯೆಯಾಗುವುದು ಸಹಜ. ಆಕ್ಸಿಜನ್ ಉತ್ಪಾದನೆ ಅಷ್ಟೇ ಇದೆ, ಬಳಕೆ ಮಾತ್ರ ಹೆಚ್ಚಾಗಿದೆ ಎಂದು ಅವರು ತಿಳಿಸಿದರು.
ಇನ್ನು, ಆಕ್ಸಿಜನ್ ಉತ್ಪಾದಕರ ಜೊತೆ ಮುಖ್ಯ ಕಾರ್ಯದರ್ಶಿ ಮಾತನಾಡಿದ್ದಾರೆ. ಹೆಚ್ಚುವರಿ ಆಕ್ಸಿಜನ್ ಪಡೆದುಕೊಂಡಿದ್ದೇವೆ. ನಮ್ಮಲ್ಲಿರುವ ಘಟಕಗಳಲ್ಲೂ ಆಕ್ಸಿಜನ್ ಉತ್ಪಾದನೆ ಮಾಡುತ್ತೇವೆ ಎಂದು ಅವರು ವಿವರಿಸಿದರು.