×
Ad

ಲಸಿಕೆ ಉಚಿತ ವಿತರಣೆ, ವಾರಾಂತ್ಯದ ಕರ್ಫ್ಯೂ ವಿಸ್ತರಣೆ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಸಾಧ್ಯತೆ

Update: 2021-04-24 18:32 IST

ಬೆಂಗಳೂರು, ಎ. 24: ರಾಜ್ಯದಲ್ಲಿ ಕೋವಿಡ್ ಎರಡನೆ ಅಲೆ ನಿಯಂತ್ರಣ ಸಂಬಂಧ ಹೇರಿರುವ ವಾರಾಂತ್ಯದ ಕರ್ಫ್ಯೂವನ್ನು ವಾರದ ದಿನಗಳಲ್ಲಿ ಮೇ 4ರವರೆಗೆ ವಿಸ್ತರಣೆ ಹಾಗೂ ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ಉಚಿತವಾಗಿ ವಿತರಣೆ ಮಾಡುವ ಸಂಬಂಧ ಸೋಮವಾರ(ಎ.26) ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸುವ ಸಾಧ್ಯತೆಗಳಿವೆ.

ಈಗಾಗಲೇ ಕೇರಳ, ಬಿಹಾರ, ಜಾರ್ಖಂಡ್ , ಗೋವಾ, ಛತ್ತೀಸ್‍ಗಢ, ಉತ್ತರಪ್ರದೇಶ, ಅಸ್ಸಾಂ, ಮಧ್ಯಪ್ರದೇಶ ಹಾಗೂ ಸಿಕ್ಕಿಂ ರಾಜ್ಯಗಳಲ್ಲಿ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡುವ ಘೋಷಣೆ ಮಾಡಿದ್ದು, ರಾಜ್ಯ ಸರಕಾರವು ಅದೇ ಮಾದರಿಯನ್ನು ಅನುಸರಿಸಬೇಕು ಎಂದು ಪ್ರತಿಪಕ್ಷಗಳು ಸೇರಿದಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಜನರಿಗೆ ಸರಕಾರ ನೆರವಾಗಬೇಕೆಂದು ಆಡಳಿತಾರೂಢ ಬಿಜೆಪಿ ಮುಖಂಡರು ಒತ್ತಾಯಿಸುತ್ತಿದ್ದಾರೆ.

ಈಗಾಗಲೇ ರಾಜ್ಯ ಸರಕಾರ ಒಂದು ಕೋಟಿ ಲಸಿಕೆ ಖರೀದಿಗೆ 400 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ರಾಜ್ಯದ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಿದರೆ ಸುಮಾರು 2 ಸಾವಿರ ಕೋಟಿ ರೂ.ಗಳಷ್ಟು ವೆಚ್ಚವಾಗಲಿದೆ. 2.50 ಲಕ್ಷ ಕೋಟಿ ರೂ.ಬಜೆಟ್ ಮಂಡಿಸಿರುವ ಸರಕಾರಕ್ಕೆ 2 ಸಾವಿರ ಕೋಟಿ ರೂ.ಹೊರೆಯಾಗುವುದಿಲ್ಲ. ಹೀಗಾಗಿ ಪಲ್ಸ್ ಪೋಲಿಯೋ ಮಾದರಿಯಲ್ಲೆ ಉಚಿವಾಗಿ ಲಸಿಕೆ ನೀಡಬೇಕೆಂಬ ಒತ್ತಡವೂ ಕೇಳಿಬಂದಿದೆ.

ರಾಜ್ಯದಲ್ಲಿ ಕೊರೋನ ಸೋಂಕಿತರಿಗೆ ಹಾಸಿಗೆ, ಆಕ್ಸಿಜನ್, ಐಸಿಯು ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಕರ್ಫ್ಯೂ ವಿಸ್ತರಣೆ, ಕೋವಿಡ್ ಲಸಿಕೆ ಉಚಿತ ವಿತರಣೆ ಮಾಡುವ ಸಂಬಂಧ ಸೋಮವಾರ ನಡೆಯಲಿರುವ ಸಂಪುಟ ಸಹೋದ್ಯೋಗಿಗಳೊಂದಿಗೆ ಸಿಎಂ ಬಿಎಸ್‍ವೈ ಸಮಾಲೋಚನೆ ನಡೆಸಲಿದ್ದಾರೆ. ಈ ಸಂಬಂಧ ಸೂಕ್ತ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News