ಕೋವಿಡ್ ಮಿತಿ ಮೀರುತ್ತಿದೆ, ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿ: ಬಿಎಸ್‍ವೈಗೆ ಸಂಸದೆ ಶೋಭಾ ಪತ್ರ

Update: 2021-04-24 14:46 GMT

ಬೆಂಗಳೂರು, ಎ. 24: ಕೋವಿಡ್ ಸೋಂಕು ರಾಜ್ಯದಲ್ಲಿ ಮಿತಿ ಮೀರುತ್ತಿದ್ದು, ಮುಂಬರುವ ಹದಿನೈದು ದಿನಗಳಲ್ಲಿ ಪರಿಸ್ಥಿತಿ ಕೈಮೀರಿ ಹೋಗುವ ಎಲ್ಲ ಸಾಧ್ಯತೆಗಳಿವೆ. ಹೀಗಾಗಿ ಸರಕಾರ ಸೋಂಕು ಹರಡುವುದನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಜೊತೆಗೆ ಆಸ್ಪತ್ರೆ ಸಹಿತ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಕೋರಿ ಸಂಸದೆ ಶೋಭಾ ಕರಂದ್ಲಾಜೆ, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ನಾಲ್ಕು ಪುಟಗಳ ಪತ್ರ ಬರೆದಿದ್ದಾರೆ.

ಆರೋಗ್ಯ ವೈದ್ಯಕೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡಬೇಕು. ಪ್ರತಿನಿತ್ಯ ಆಕ್ಸಿಜನ್ ಮತ್ತು ರೆಮ್‍ಡೆಸಿವಿರ್ ಲಭ್ಯತೆ ಬಗ್ಗೆ ಆರೋಗ್ಯ ಇಲಾಖೆ ಜನರಲ್ಲಿನ ಆತಂಕ ದೂರ ಮಾಡಬೇಕು. ಮುಂಬರುವ ದಿನಗಳಲ್ಲಿ ಹೆಚ್ಚಿನ ಬೆಡ್, ವೆಂಟಿಲೇಟರ್ ಗಳ ಅವಶ್ಯಕತೆ ಇದ್ದು, ಇಂದಿನಿಂದಲೇ ನಗರ, ವಾರ್ಡ್, ತಾಲೂಕು ಮಟ್ಟದಲ್ಲಿ ಲಭ್ಯವಿರುವ ಶಾಲಾ-ಕಾಲೇಜು, ಹಾಸ್ಟೆಲ್‍ಗಳಲ್ಲಿ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಬೇಕು.

ಸೋಂಕಿತರು ಆಸ್ಪತ್ರೆಯಿಂದ ಆಸ್ಪತ್ರೆ ಸುತ್ತಾಟ ತಪ್ಪಿಸಲು ಪ್ರತಿ ಆಸ್ಪತ್ರೆಯಲ್ಲಿ ಹೆಲ್ಪ್ ಡೆಸ್ಕ್ ಸಿಬ್ಬಂದಿ ಮಾರ್ಗದರ್ಶನ ಮಾಡಬೇಕು. ಮುಂಬರುವ ದಿನಗಳಲ್ಲಿ ಬೆಂಗಳೂರು ನಗರದಲ್ಲಿ 1 ಸಾವಿರ ವೆಂಟಿಲೇಟರ್ ಗಳು ಹಾಗೂ ರಾಜ್ಯದ ಇತರೆ ಕಡೆಗಳಲ್ಲಿ 1 ಸಾವಿರ ವೆಂಟಿಲೇಟರ್ ಗಳನ್ನು ಹೆಚ್ಚಿಸಲು ಹಣಕಾಸಿನ ನೆರವು ನೀಡಬೇಕು. ಕೋವಿಡ್ ಹೆಲ್ಪ್ ಲೈನ್ ಸಿಗುತ್ತಿಲ್ಲ ಎಂಬ ದೂರುಗಳಿವೆ. ಹೀಗಾಗಿ ಹೆಲ್ಪ್ ಲೈನ್ ಸಂಖ್ಯೆ ಮತ್ತಷ್ಟು ಏರಿಕೆ ಮಾಡಬೇಕು. ಅಲ್ಲದೆ, ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲು ಕ್ರಮ ವಹಿಸಬೇಕು ಎಂದು ಶೋಭಾ ಕರಂದ್ಲಾಜೆ, ಸರಕಾರಕ್ಕೆ ಸಲಹೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News