ಕೋವಿಡ್ ಹೆಚ್ಚಳ: 16 ಜಿಲ್ಲೆಗಳಲ್ಲಿ ಕೋರ್ಟ್ ಕಲಾಪ ಸೀಮಿತಗೊಳಿಸಿ ಹೈಕೋರ್ಟ್ ಆದೇಶ

Update: 2021-04-24 16:42 GMT

ಬೆಂಗಳೂರು, ಎ.24: ಕೋವಿಡ್ ಎರಡನೇ ಅಲೆ ತೀವ್ರಗೊಳ್ಳುತ್ತಿರುವ ಕಾರಣದಿಂದಾಗಿ ರಾಜ್ಯದ ರಾಜಧಾನಿ ಬೆಂಗಳೂರು, ದಕ್ಷಿಣ ಕನ್ನಡ ಸೇರಿದಂತೆ ಒಟ್ಟು 16 ಜಿಲ್ಲೆಗಳಲ್ಲಿ ನ್ಯಾಯಾಲಯಗಳ ಕಲಾಪನ್ನು ಸೀಮಿತಗೊಳಿಸಿ ಹೈಕೋರ್ಟ್ ಆದೇಶಿಸಿದೆ.

ಈ ಮೊದಲು ಒಂದು ಸಾವಿರಕ್ಕೂ ಅಧಿಕ ಕೋವಿಡ್ ಪ್ರಕರಣಗಳಿದ್ದ 9 ಜಿಲ್ಲೆಗಳ ನ್ಯಾಯಾಲಯಗಳಿಗೆ ಸೀಮಿತ ಕಲಾಪ ನಿಯಮಗಳನ್ನು ಅನ್ವಯಿಸಿ ಆದೇಶ ಹೊರಡಿಸಲಾಗಿತ್ತು. ಆದರೆ, ಇದೀಗ ಸಾವಿರಕ್ಕೂ ಅಧಿಕ ಕೋವಿಡ್ ಪ್ರಕರಣಗಳಿರುವ 16 ಜಿಲ್ಲೆಗಳಿಗೆ ಈ ನಿಯಮಗಳನ್ನು ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.

ಆದೇಶಿಸಿರುವ ಜಿಲ್ಲೆಗಳಲ್ಲಿ ನ್ಯಾಯಾಲಯಗಳು ಮೇ 22ರವರೆಗೆ ಸೀಮಿತ ಅವಧಿಗೆ ಕಾರ್ಯನಿರ್ವಹಿಸಲಿದ್ದು, ವಿಡಿಯೊ ಸಂವಾದ ಮೂಲಕ ಮಾತ್ರವೇ ಕೋರ್ಟ್ ಕಲಾಪಗಳು ನಡೆಯಲಿವೆ, ಇನ್ನು, ಯಾವುದೇ ಸಾಕ್ಷ್ಯಗಳ ವಿಚಾರಣೆ ನಡೆಸುವಂತಿಲ್ಲ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನಿರ್ದೇಶನಗಳಿರುವ ಪ್ರಕರಣಗಳಲ್ಲಿ ಮಾತ್ರ ಸಾಕ್ಷಿ ವಿಚಾರಣೆ ನಡೆಸಬೇಕು ಎಂದು ಉಲ್ಲೇಖಿಸಲಾಗಿದೆ.

ಅದೇ ರೀತಿ, ನ್ಯಾಯಾಲಯಗಳಿಗೆ ಕಕ್ಷಿದಾರರು ಬರುವಂತಿಲ್ಲ. ಯಾವುದೇ ರೀತಿಯಲ್ಲೂ ವ್ಯತಿರಿಕ್ತ ಆದೇಶಗಳನ್ನು ನೀಡಬಾರದು ಎಂದು ಆದೇಶಿಸಲಾಗಿದೆ. ಎಲ್ಲ ನ್ಯಾಯಾಂಗ ಸಿಬ್ಬಂದಿ ಏಪ್ರಿಲ್ ಅಂತ್ಯದೊಳಗೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು ಎಂದೂ ಆದೇಶದಲ್ಲಿ ಹೇಳಲಾಗಿದೆ.

ಯಾವ್ಯಾವ ಜಿಲ್ಲೆ: ಬೆಂಗಳೂರು ನಗರ ಮತ್ತು ಗ್ರಾಮಾಂತರ, ದಕ್ಷಿಣ ಕನ್ನಡ, ಬಳ್ಳಾರಿ, ಬೀದರ್, ಹಾಸನ, ಕಲಬುರ್ಗಿ, ಮೈಸೂರು, ತುಮಕೂರು, ಬೆಳಗಾವಿ, ಚಿಕ್ಕಬಳ್ಳಾಪುರ, ಧಾರವಾಡ, ಮಂಡ್ಯ, ರಾಯಚೂರು, ಶಿವಮೊಗ್ಗ, ವಿಜಯಪುರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News