ಆಕ್ಸಿಜನ್ ಕೊರತೆ ಇದ್ದರೆ ನನ್ನ ಗಮನಕ್ಕೆ ತನ್ನಿ: ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸಿಎಂ ಬಿಎಸ್‍ವೈ ಸೂಚನೆ

Update: 2021-04-24 16:55 GMT

ಬೆಂಗಳೂರು, ಎ. 24: ರಾಜ್ಯದಲ್ಲಿ ಕೊರೋನ ಸೋಂಕು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ಪಡೆದ ಮುಖ್ಯಮಂತ್ರಿ ಯಡಿಯೂರಪ್ಪ, ಸೋಂಕಿತರ ಚಿಕಿತ್ಸೆಗೆ ಆಕ್ಸಿಜನ್ ಕೊರತೆ ಸಹಿತ ಏನೇ ಅಗತ್ಯವಿದ್ದರೂ ನನ್ನ ಅಥವಾ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತನ್ನಿ ಎಂದು ಸಲಹೆ ಮಾಡಿದ್ದಾರೆ.

ಶನಿವಾರ ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲೇ ಬೀಡುಬಿಟ್ಟಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಸತತವಾಗಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು ಪರಿಸ್ಥಿತಿ ಮಾಹಿತಿ ಪಡೆದರು. ಜಿಲ್ಲಾ ಕೇಂದ್ರಗಳಲ್ಲಿ ಆಕ್ಸಿಜನ್, ರೆಮ್‍ಡಿಸಿವಿರ್ ಕೊರತೆ ಕಂಡುಬಂದರೆ ಕೂಡಲೇ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಬೇಕು ಅಥವಾ ನನ್ನ ಗಮನಕ್ಕಾದರು ತರಬೇಕು ಎಂದು ಸೂಚನೆ ನೀಡಿದರು.

ಕೋವಿಡ್ ಸೋಂಕಿತರಿಗೆ ಯಾವುದೇ ಕಾರಣಕ್ಕೂ ಆಕ್ಸಿಜನ್ ಪೂರೈಕೆಯಲ್ಲಿ ಯಾವುದೇ ರೀತಿಯಲ್ಲಿಯೂ ವ್ಯತ್ಯಯ ಉಂಟಾಗದಂತೆ ಕ್ರಮವಹಿಸಬೇಕು. ಏನೇ ತುರ್ತು ಸಂದರ್ಭ ಅಥವಾ ಅನಿವಾರ್ಯತೆ ಇದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಅಥವಾ ನನ್ನ ಗಮನಕ್ಕೆ ತಂದು ಪರಿಸ್ಥಿತಿ ನಿಭಾಯಿಸಬೇಕು ಎಂದು ಯಡಿಯೂರಪ್ಪ, ಜಿಲ್ಲಾಧಿಕಾರಿಗಳಿಗೆ ಇದೇ ವೇಳೆ ನಿರ್ದೇಶನ ನೀಡಿದ್ದಾರೆಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News