ವಾರಾಂತ್ಯದ ಕರ್ಫ್ಯೂ: ಕಾಫಿನಾಡು ರವಿವಾರವೂ ಸ್ತಬ್ಧ
ಚಿಕ್ಕಮಗಳೂರು, ಎ.25: ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ಕಾಫಿನಾಡು ರವಿವಾರವೂ ಸಂಪೂರ್ಣ ಸ್ತಬ್ಧಗೊಂಡಿತ್ತು, ಕೋವಿಡ್-19 ಎರಡನೇ ಅಲೆ ಹರಡುವಿಕೆ ತಡೆಗಟ್ಟಲು ರಾಜ್ಯ ಸರಕಾರ ವಿಧಿಸಿರುವ ವಾರಾಂತ್ಯದ ಕರ್ಫ್ಯೂಗೆ ಕಾಫಿನಾಡಿನ ಜನ ವ್ಯಾಪಕ ಬೆಂಬಲ ವ್ಯಕ್ತಪಡಿಸಿದರು. ಜಿಲ್ಲಾದ್ಯಂತ ಶನಿವಾರ ವಿಧಿಸಿದ ವಾರಾಂತ್ಯದ ಕರ್ಫ್ಯೂ ಯಶಸ್ವಿಯಾಗಿದ್ದು, ರವಿವಾರದ ಕರ್ಫ್ಯೂ ಕೂಡ ಯಶಕಂಡಿದೆ.
ರವಿವಾರ ನಗರದಲ್ಲಿ ಜನಸಂಚಾರ ಮತ್ತು ವಾಹನಸಂಚಾರ ಸಂಪೂರ್ಣ ಸ್ತಬ್ಧಗೊಂಡಿದ್ದ ಪರಿಣಾಮ ರಸ್ತೆಗಳೆಲ್ಲ ಖಾಲಿ ಖಾಲಿಯಾಗಿತ್ತು. ಜನಸಂಚಾರ, ವಾಹನ ಇಲ್ಲದೇ ಇಡೀ ನಗರವೇ ಬಿಕೋ ಎನ್ನುತ್ತಿದ್ದ ದೃಶ್ಯಗಳು ನಗರದ ಎಲ್ಲ ರಸ್ತೆಗಳಲ್ಲೂ ಕಂಡು ಬಂತು. ರವಿವಾರ ಬೆಳಗ್ಗೆ 6ರಿಂದ 10ರವರೆಗೂ ಅಗತ್ಯವಸ್ತುಗಳಾದ ಹಾಲು, ಹಣ್ಣು, ಹೂವು, ದಿನಸಿ ಸೇರಿದಂತೆ ಇತರ ವಸ್ತುಗಳ ಖರೀದಿ ಸಂದರ್ಭದಲ್ಲಿ ನಗರ ಸೇರಿದಂತೆ ಜಿಲ್ಲೆಯ ಎಲ್ಲ ಪಟ್ಟಣಗಳ ವ್ಯಾಪ್ತಿಯಲ್ಲಿ ಜನಜಂಗುಳಿ ಕಂಡು ಬಂತು. ಬೆಳಗ್ಗೆ 10 ಬಳಿಕ ಅಗತ್ಯ ವಸ್ತುಗಳ ಅಂಗಡಿ ಮುಂಗಟ್ಟುಗಳು ಬಂದ್ ಆದ ಪರಿಣಾಮ ಇಡೀ ಜಿಲ್ಲೆ ಸ್ತಬ್ಧಗೊಂಡಿತು.
ರವಿವಾರ ಬೆಳಗ್ಗೆ ನಗರದ ಮಾರ್ಕೆಟ್ ರಸ್ತೆಯಲ್ಲಿರುವ ಸಂತೇ ಮೈದಾನ ಮತ್ತು ಎಪಿಎಂಸಿ ಮಾರುಕಟ್ಟೆಯಲ್ಲಿ ಕೊರೊನಾ ಸೋಂಕಿನ ಭೀತಿಯಿಲ್ಲದೇ ಗುಂಪುಗೂಡಿ ಅಗತ್ಯ ವಸ್ತುಗಳನ್ನು ಖರೀದಿಗೆ ಸಾರ್ವಜನಿಕರು ಮುಗಿಬಿದ್ದರು. ನಗರದ ಮಾಕೇರ್ಟ್ ರಸ್ತೆಯಲ್ಲಿರುವ ಮೀನು ಮಾರುಕಟ್ಟೆ, ಮಾಂಸದಂಗಡಿಗಳಲ್ಲಿ ಜನರ ದಂಡೇ ಕಂಡು ಬಂತು. ಕೆಲವರು ಮಾಸ್ಕ್ ಧರಿಸದೇ ಮೀನು ಮಾಂಸ ಖರೀದಿಸುತ್ತಿದ್ದ ದೃಶ್ಯಕಂಡು ಬಂತು. ಇನ್ನು ನಗರದ ವಿವಿಧೆಡೆ ಬೆಳ್ಳಂ ಬೆಳಗ್ಗೆಯೇ ಜನರು ಹಾಲು, ಹಣ್ಣು, ಖರೀದಿಗಿಂತ ಹೆಚ್ಚಾಗಿ ಮೀನು, ಮಾಂಸ, ಮೊಟ್ಟೆ ಅಂಗಡಿಗಳ ಮುಂದೇ ಸಾಲುಗಟ್ಟಿ ನಿಂತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.
ರವಿವಾರ ಬೆಳಗ್ಗೆ 10ಗಂಟೆಯ ಬಳಿಕ ಕಾರ್ಯಾಚರಣೆಗಿಳಿದ ಪೊಲೀಸರು ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದರು.ಪ್ರತಿದಿನ ಜನರಿಂದ ಗಿಜುಗುಡುತ್ತಿದ್ದ ಸಂತೆ ಮಾರುಕಟ್ಟೆ 11ರ ವೇಳೆಗೆ ಸಂಪೂರ್ಣ ಸ್ತಬ್ಧಗೊಂಡಿತು.
ಪೆಟ್ರೋಲ್ ಬಂಕ್, ಮೆಡಿಕಲ್ ಶಾಪ್‍ಗಳನ್ನು ಹೊರತುಪಡಿಸಿ ನಗರದ ಪ್ರಮುಖ ರಸ್ತೆಗಳಾದ ಎಂ.ಜಿ.ರಸ್ತೆ, ಐಜಿರಸ್ತೆ, ಮಾರ್ಕೆಟ್ ರಸ್ತೆ, ಬಸವನಹಳ್ಳಿ ರಸ್ತೆ, ವಿಜಯಪುರ ರಸ್ತೆಯಲ್ಲಿರುವ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಮಾಡಲಾಗಿತ್ತು. ವಾಹನ ಸಂಚಾರವು ಸಂಪೂರ್ಣ ಸ್ತಬ್ಧಗೊಂಡಿತ್ತು. ಅಗತ್ಯ ವಸ್ತುಗಳ ಖರೀದಿಗೆ ರಸ್ತೆಗಿಳಿದ ವಾಹನ ಸವಾರರನ್ನು ಪೊಲೀಸರು ತಡೆದು ವಿಚಾರಣೆ ನಡೆಸಿ ಕಳಿಸುತ್ತಿದ್ದರು. ವಿನಾಕಾರಣ ರಸ್ತೆಯಲ್ಲಿ ಸಂಚಾರ ನಡೆಸುತ್ತಿದ್ದವರನ್ನು ಪೊಲೀಸರು ತಡೆದು ಎಚ್ಚರಿಕೆ ನೀಡಿ ಮನೆಗೆ ಕಳಿಸುತ್ತಿದ್ದ ದೃಶ್ಯಗಳು ಕಂಡು ಬಂತು.
ರವಿವಾರ ಬೆಳಗ್ಗೆ 6ರಿಂದ 10ರವರೆಗೂ ನಗರದಲ್ಲಿ ಆಟೊ, ಟ್ಯಾಕ್ಸಿ ಸೇರಿದಂತೆ ಇತರ ವಾಹನಗಳು ಸಂಚಾರ ನಡೆಸಿದವು. 10ಗಂಟೆಯ ಬಳಿಕ ವಾಹನ ಸಂಚಾರ ಸ್ತಬದ್ಧಗೊಂಡಿತು.