×
Ad

ಆರೋಗ್ಯ ಸಚಿವರ ರಾಜೀನಾಮೆ ಪಡೆದು ಜನರನ್ನು ರಕ್ಷಿಸಿ: ಮುಖ್ಯಮಂತ್ರಿಗೆ ಡಿ.ಕೆ.ಶಿವಕುಮಾರ್ ಆಗ್ರಹ

Update: 2021-04-25 19:15 IST

ಬೆಂಗಳೂರು, ಎ. 25: `ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಜವಾಬ್ದಾರಿ ನಿರ್ವಹಿಸುವುದರಲ್ಲಿ ಸೋತಿದ್ದಾರೆ. ಕೊರೋನ ಸೋಂಕು ನಿಯಂತ್ರಿಸುವುದರತ್ತ ಗಮನಿಸದೆ ಸೀಡಿ ತಡೆಯಾಜ್ಞೆ ತರುವುದರಲ್ಲಿ, ಕಂಡವರ ಹೆಂಡತಿಯರ ಲೆಕ್ಕ ಹಾಕುವುದರಲ್ಲಿ ಮುಳುಗಿ ಈಗ ಸುಳ್ಳುಗಳ ಸಮರ್ಥನೆಗೆ ಇಳಿದಿದ್ದಾರೆ. ಸಚಿವ ಸ್ಥಾನದಲ್ಲಿರಲು ನಾಲಾಯಕ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ, ಕೂಡಲೇ ರಾಜೀನಾಮೆ ಪಡೆದು ಜನರನ್ನು ರಕ್ಷಿಸಿ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಆಗ್ರಹಿಸಿದ್ದಾರೆ.

ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, `ನಿಮ್ಮ ಅನಧಿಕೃತ ಲಾಕ್‍ಡೌನ್ ಜನತೆಯನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳುತ್ತಿದೆ. ಕೂಡಲೇ ಪ್ರತಿ ಅರ್ಹ ಕುಟುಂಬಕ್ಕೆ ಕನಿಷ್ಠ 10 ಸಾವಿರ ರೂ.ಆರ್ಥಿಕ ನೆರವು ನೀಡಿ, ಅನ್ನಭಾಗ್ಯ ಅಕ್ಕಿಯನ್ನು 10ಕೆಜಿ ನೀಡಿ, ಸಣ್ಣ ವ್ಯಾಪಾರಿಗಳು, ಚಾಲಕರಿಗೆ ಪ್ಯಾಕೇಜ್ ನೀಡಿ, ಎಂಎಸ್‍ಎಂಇಗಳಿಗೆ ಅಗತ್ಯ ನೆರವು ನೀಡಿ ಉದ್ಯೋಗ ನಷ್ಟವಾಗದಂತೆ ನೋಡಿಕೊಳ್ಳಿ' ಎಂದು ಒತ್ತಾಯಿಸಿದ್ದಾರೆ.

`ಬಿಎಸ್‍ವೈ ಅವರೇ ನೀವು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಚಾಪೆಯ ಕೆಳಗೆ ನುಸುಳುವ ಕೆಲಸ ಮಾಡಿದ್ದೀರೆಂದು ಗೊತ್ತಿದೆ. ಅಧಿಕೃತವಾಗಿ ಘೋಷಿಸಿದರೆ ನೆರವು ನೀಡಬೇಕಾದ ಅನಿವಾರ್ಯ ಬರುತ್ತದೆಂದು ಅನಧಿಕೃತ ಲಾಕ್‍ಡೌನ್ ಜಾರಿಗೊಳಿಸಿದಿರಿ. ಆದರೆ, ಸಣ್ಣ ವ್ಯಾಪಾರಿಗಳು, ಕೂಲಿ ಕಾರ್ಮಿಕರು, ಚಾಲಕರು, ದಿನಗೂಲಿ ನೌಕರರು ಉಪವಾಸ ಮಲಗುತ್ತಿದ್ದಾರೆ' ಎಂದು ಡಿ.ಕೆ.ಶಿವಕುಮಾರ್ ಗಮನ ಸೆಳೆದಿದ್ದಾರೆ.

`ಮತ್ತೆ ಮತ್ತೆ ಹೇಳುತ್ತೇವೆ, ಕೊರೋನ ಸಾವುಗಳೆಲ್ಲವೂ ಬಿಜೆಪಿ ನಡೆಸುತ್ತಿರುವ ಕಗ್ಗೊಲೆಗಳು. ಅವರ ಸುಳ್ಳು, ಭ್ರಷ್ಟಾಚಾರ, ನಿರ್ಲಕ್ಸ್ಯ, ನಿರ್ಲಜ್ಜತನವೇ ಇಂದಿನ ಈ ಎಲ್ಲಾ ಅನಾಹುತಗಳಿಗೆ ಕಾರಣ. ಜನ ಸಾಯುತ್ತಿದ್ದರೂ ಕರುಣೆ ಇಲ್ಲದಂತೆ ಸುಳ್ಳಿನ ಭಂಡತನದ ಪ್ರಭು ಚೌಹಾಣ್‍ರಂತವರ ಮೂಲಕ ರಾಜ್ಯವನ್ನು ಸ್ಮಶಾನ ಮಾಡಲು ಹೊರಟಿದೆ' ಎಂದು ಶಿವಕುಮಾರ್ ಟೀಕಿಸಿದ್ದಾರೆ.

`ಕೊರೋನ ಸಂಕಟದ ನಡುವೆ ನರೇಂದ್ರ ಮೋದಿ ಅವರು ಇಷ್ಟು ದಿನ ಮಾಡಿದ್ದು, ಚುನಾವಣಾ ಸಭೆಗಳಲ್ಲಿ ಭಾಷಣ್ ಕಿ ಬಾತ್ ಇಂದು ಗೋಡೆಗಳ ಮಧ್ಯೆ ಕುಳಿತು ಮನ್ ಕಿ ಬಾತ್. ಸಾವಿನ ಮನೆಗೆ ಹೊರಟವರನ್ನು ಉಳಿಸುವ ಕೆಲಸವಾಗಬೇಕೇ ಹೊರತು, ಬರೀ ಮಾತುಗಳ ಬೊಗಳೆ ಪ್ರಲಾಪವಲ್ಲ' ಎಂದು ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಗಡ್ಡ ಹಿಡಿದು ನೇತಾಡುವುದನ್ನು ಬಿಡಿ"
`ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಮೋದಿಯವರು ನಾಲ್ಕಾಣೆ ಕೊಟ್ಟಿದ್ದಕ್ಕೆ ಎಂಟಾಣೆ ಬಹುಪರಾಕ್ ಹಾಕ್ತಿದ್ದಿರಲ್ಲ ಸ್ವಾಮಿ! ಆಕ್ಸಿಜನ್ ನೀವು ಕೇಳಿದ್ದು 1 ಸಾವಿರ ಟನ್, ಕೊಡುತ್ತಿರುವುದು 800 ಟನ್, ರೆಮ್‍ಡಿಸಿವಿರ್ ಅಗತ್ಯವಿದ್ದಿದ್ದು 2ಲಕ್ಷ ವಯಲ್ಸ್, ಕೊಡುತ್ತಿರುವುದು 1.22 ಲಕ್ಷ ವಯಲ್ಸ್, ರಾಜ್ಯ ನರಳುತ್ತಿದೆ. ಮೋದಿ ಗಡ್ಡ ಹಿಡಿದು ನೇತಾಡುವುದನ್ನು ಬಿಡಿ'
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News