ಪತ್ರಕರ್ತ ಸಿದ್ದಿಕ್ ಕಪ್ಪನ್ ಬಿಡುಗಡೆಗೆ ಕರ್ನಾಟಕದ ಪತ್ರಕರ್ತರು ಧನಿ ಎತ್ತಬೇಕು: ಅಬ್ದುಲ್ ಮಜೀದ್ ಮನವಿ

Update: 2021-04-25 15:48 GMT

ಮೈಸೂರು,ಎ.25: ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರನ್ನು ಉತ್ತರ ಪ್ರದೇಶ ಸರ್ಕಾರ ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದು, ಪತ್ರಕರ್ತರು ಎಂದರೆ ಎಲ್ಲರೂ ಒಂದೇ. ಹಾಗಾಗಿ ದೇಶದ ಮತ್ತು ರಾಜ್ಯದ ಎಲ್ಲಾ ಪತ್ರಕರ್ತರುಗಳು ಒಕ್ಕೊರಲಿನಿಂದ ನಿಂತು ಸಿದ್ದಿಕ್ ಕಪ್ಪನ್ ಪರ ಧನಿ ಎತ್ತಬೇಕಿದೆ ಎಂದು ಎಸ್‍ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದಲ್ ಮಜೀದ್ ಮನವಿ ಮಾಡಿದ್ದಾರೆ.

ಈ ಸಂಬಂಧ ರವಿವಾರ “ವಾರ್ತಾಭಾರತಿ”ಯೊಂದಿಗೆ ಮಾತನಾಡಿದ ಅವರು, ಸಿದ್ದಿಕ್ ಕಪ್ಪನ್ ಓರ್ವ ಪತ್ರಕರ್ತ, ಅವರು ಹತ್ರಸ್ ಘಟನೆಯನ್ನು ವರದಿ ಮಾಡಲು ತೆರಳಬೇಕಾದರೆ ಉತ್ತರ ಪ್ರದೇಶ ಪೊಲೀಸರು ಅವರನ್ನು ತಡೆದು ಸಾಮಾಜಿಕ ಗಲಭೆ ಎಬ್ಬಿಸಲು ಬರುತ್ತಿದ್ದಾರೆ ಎಂದು ಕಳೆದ ಅಕ್ಟೋಬರ್‍ನಲ್ಲಿ ಬಂಧನಕ್ಕೊಳಪಡಿಸಿದ್ದಾರೆ. ಆದರೆ ಇದೂವರೆಗೂ ಅವರಿಗೆ ಜಾಮೀನು ದೊರಕದಿರುವುದು ದುರದೃಷ್ಟಕರ ಎಂದರು.

ಮೂಲಭೂತ ಹಕ್ಕುಗಳು ಸ್ವಾತಂತ್ರ್ಯ ಎಂದರೆ ಎಲ್ಲಾ ಪತ್ರಕರ್ತರಿಗೂ ಒಂದೇ, ಅರ್ನಬ್ ಗೋಸ್ವಾಮಿ ಅವರಿಗೆ ರಾತ್ರೋ ರಾತ್ರಿ ಜಾಮೀನು ನೀಡಲಾಗುತ್ತದೆ. ಆದರೆ ಸಿದ್ದಿಕ್ ಕಪ್ಪನ್ ಅವರಿಗೆ ಕೇರಳ ರಾಜ್ಯದ ಪತ್ರಕರ್ತರ ಸಂಘ ಸುಪ್ರೀಂ ಕೋರ್ಟ್‍ಗೆ ಅಫಿಡವಿಟ್ ಸಲ್ಲಿಸಿದ್ದರೂ ಕೇಸನ್ನು ಮುಂದೂಡಲಾಗುತ್ತದೆ. ಜೊತೆಗೆ 9 ಮಂದಿ ಸಂಸದರು ಪತ್ರ ಬರೆದರೂ ಬಿಡುಗಡೆ ಭಾಗ್ಯ ಸಿಗುವುದಿಲ್ಲ. ಅರ್ನಬ್ ಗೋಸ್ವಾಮಿಯೂ ಪತ್ರಕರ್ತರೇ ಸಿದ್ದಿಕ್ ಕುಪ್ಪನ್ ಸಹ ಪತ್ರಕರ್ತರೇ, ಯಾಕೀ ತಾರತಮ್ಯ ಎಂದು ಪ್ರಶ್ನಿಸಿದರು.

ಸಿದ್ದಿಕ್ ಕಪ್ಪನ್ ಅವರಿಗೆ ಮಥುರಾ ಮೆಡಿಕಲ್ ಕಾಲೇಜಿನಲ್ಲಿ ಮಂಚಕ್ಕೆ ಕೈ ಕೋಳ ಹಾಕಿ ಅವರು ಟಾಯ್ಲೆಟ್‍ಗೂ ಹೋಗಲು ಅವಕಾಶ ನೀಡದೆ ಹಿಂಸೆ ನೀಡಲಾಗುತ್ತಿದೆ. ಅವರ ಜೀವನ ಅಪಾಯದಲ್ಲಿದ್ದು,  ಅವರ ಪತ್ನಿ ಭಾರತದ ನೂತನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರಿಗೆ ಪತ್ರ ಬರೆದಿದ್ದಾರೆ. ಸಹೋದ್ಯೋಗಿ ಮೇಲಿನ ದೌರ್ಜನ್ಯ ಕಂಡು ಸುಮ್ಮನೆ ಕೂರಬಾರದು. ಹಾಗಾಗಿ  ಕರ್ನಾಟಕದ ಎಲ್ಲಾ ಪತ್ರಕರ್ತರು ಕೇಂದ್ರ ಸರ್ಕಾರ ಮತ್ತು ನ್ಯಾಯಾಲಯದ ಗಮನ ಸೆಳೆಯುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News