ಕೋವಿಡ್ ಲಸಿಕೆ ಉಚಿತ ವಿತರಣೆ?: ಸಿಎಂ ಅಧ್ಯಕ್ಷತೆಯಲ್ಲಿ ಸೋಮವಾರ ಸಂಪುಟ ಸಭೆ

Update: 2021-04-25 16:00 GMT

ಬೆಂಗಳೂರು, ಎ. 25: ಕೋವಿಡ್ ಲಸಿಕೆ ರಾಜ್ಯದಲ್ಲಿ ಉಚಿತ ವಿತರಣೆ ಹಾಗೂ ಕೊರೋನ ಎರಡನೆ ಅಲೆ ನಿಯಂತ್ರಣಕ್ಕೆ ಕಫ್ರ್ಯೂವನ್ನು ವಾರದ ದಿನಗಳಲ್ಲಿ ವಿಸ್ತರಣೆ ಸೇರಿದಂತೆ ಇನ್ನಿತರ ಮಹತ್ವದ ವಿಚಾರಗಳ ಚರ್ಚೆಗೆ ನಾಳೆ(ಎ.26) ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ಜರುಗಲಿದೆ.

ನಾಳೆ(ಎ.26) ಬೆಳಗ್ಗೆ 11ಗಂಟೆಯ ಸುಮಾರಿಗೆ ವಿಧಾನಸೌಧದ ಮೂರನೆ ಮಹಡಿಯಲ್ಲಿರುವ ಸಮ್ಮೇಳನ ಸಭಾಂಗಣದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಉಪಮುಖ್ಯಮಂತ್ರಿಗಳಾದ ಡಾ.ಅಶ್ವತ್ಥ ನಾರಾಯಣ, ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಕಂದಾಯ ಸಚಿವ ಆರ್.ಅಶೋಕ್ ಸಹಿತ ಸಂಪುಟ ಸಹೋದ್ಯೋಗಿಗಳು ಪಾಲ್ಗೊಳ್ಳಲಿದ್ದಾರೆ.

ಕೋವಿಡ್ ಸೋಂಕಿತ ಪ್ರಕರಣಗಳ ಸಂಖ್ಯೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದ್ದು, ತುರ್ತು ಅಗತ್ಯ ಇರುವವರಿಗೆ ಆಸ್ಪತ್ರೆ, ಹಾಸಿಗೆ, ಆಕ್ಸಿಜನ್, ಐಸಿಯು ಬೆಡ್, ಆಂಬುಲೆನ್ಸ್ ಸೇರಿದಂತೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸುವ ಸಂಬಂಧ ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News