ಎಲ್ಲ ಶಾಸಕರು ಕೈಯಿಂದ ದುಡ್ಡು ಖರ್ಚು ಮಾಡಿಯಾದರೂ ಕೊರೋನ ಸೋಂಕಿತರಿಗೆ ನೆರವಾಗಿ: ದಸಂಸ ಸಂಚಾಲಕ ಮಂಜುನಾಥ್ ಅಣ್ಣಯ್ಯ

Update: 2021-04-26 06:05 GMT

ಬೆಂಗಳೂರು: ಎಲ್ಲ ಶಾಸಕರು ಕೈಯಿಂದ ದುಡ್ಡು ಖರ್ಚು ಮಾಡಿಯಾದರೂ ಕೊರೋನ ಸೋಂಕಿತರಿಗೆ ನೆರವಾಗಬೇಕು ಎಂದು ದಲಿತ ಸಂಘರ್ಷ ಸಮಿತಿ ಬೆಂಗಳೂರು ವಿಭಾಗೀಯ ಸಂಚಾಲಕರಾದ ಮಂಜುನಾಥ್ ಅಣ್ಣಯ್ಯ ಒತ್ತಾಯಿಸಿದ್ದಾರೆ.

`ಕೋವಿಡ್ ಮಹಾಮಾರಿ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುವುದನ್ನು ಬಿಟ್ಟು ಸಂಕಷ್ಟದಲ್ಲಿರುವ ಸೋಂಕಿತರಿಗೆ ನೆರವು ನೀಡುವ ನಿಟ್ಟಿನಲ್ಲಿ ಕೂಡಲೇ ಕಾರ್ಯ ಪ್ರವೃತ್ತರಾಗಬೇಕು' ಎಂದು ಮಂಜುನಾಥ್ ಅಣ್ಣಯ್ಯ ಹೇಳಿದ್ದಾರೆ.

ರವಿವಾರ ಈ ಸಂಬಂಧ ಪತ್ರಿಕಾ ಪ್ರಕಟಣೆಯನ್ನೂ ನೀಡಿರುವ ಅವರು, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ 200ಕ್ಕೂ ಅಧಿಕ ಮಂದಿ ಪ್ರತಿನಿತ್ಯ ಸೋಂಕಿಗೆ ಬಲಿಯಾಗುತ್ತಿದ್ದು, ನಿತ್ಯ 25ರಿಂದ 30 ಸಾವಿರ ಪ್ರಕರಣಗಳು ಕೋವಿಡ್ ಸೋಂಕಿನ ಪರಿಸ್ಥಿತಿಯ ಭೀಕರತೆಯನ್ನು ಸೂಚಿಸುತ್ತದೆ. ಇಂತಹ ಸಂದಿಗ್ದ ಸಂದರ್ಭದಲ್ಲಿ ಜನರ ಜೀವ ಉಳಿಸುವ ನಿಟ್ಟಿನಲ್ಲಿ ಮೂರು ಪಕ್ಷಗಳ ಶಾಸಕರು ತಮ್ಮ ಕ್ಷೇತ್ರಗಳಲ್ಲೇ ಇದ್ದು, ಸೋಂಕಿತರಿಗೆ ಆಸ್ಪತ್ರೆ, ಆಕ್ಸಿಜನ್ ಸಹಿತ ಚಿಕಿತ್ಸೆ ಸೌಲಭ್ಯ ಕಲ್ಪಿಸಲು ಶ್ರಮವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯದ ಮೀಸಲು ಕ್ಷೇತ್ರಗಳ ಶಾಸಕರು ಸೇರಿದಂತೆ ಯಾವುದೇ ಶಾಸಕರಿಗೆ ಹಣಕಾಸಿನ ಸಮಸ್ಯೆ ಇಲ್ಲ. ಜೊತೆಗೆ ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯನ್ನು ಬಳಕೆ ಮಾಡಿ ತಲಾ 1 ಕೋಟಿ ರೂ.ಗಳನ್ನು ಒದಗಿಸಿದರೆ ಕೋವಿಡ್ ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಸಾಧ್ಯ. ಮಾತ್ರವಲ್ಲ, ಸೋಂಕಿನಿಂದ ಯಾವುದೇ ವ್ಯಕ್ತಿ ಸಾವನ್ನಪ್ಪಲು ಅವಕಾಶವೇ ಇಲ್ಲದ ರೀತಿಯಲ್ಲಿ ಆಕ್ಸಿಜನ್, ವೆಂಟಿಲೇಟರ್ ವ್ಯವಸ್ಥೆ ನೀಡಿ ಜನಸಾಮಾನ್ಯರಿಗೆ ಚಿಕಿತ್ಸೆ ನೀಡಬಹುದಾಗಿದೆ ಎಂದು ಮಂಜುನಾಥ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಚುನಾವಣೆ, ಉಪಚುನಾವಣೆಗಳು ಬಂದಾಗ ಮಾತ್ರವೇ ಜನರ ಬಗ್ಗೆ ಅಭಿಮಾನದ ಮಾತುಗಳನ್ನಾಡುವ ಶಾಸಕರು, ಸಂಕಷ್ಟದ ಸಂದರ್ಭದಲ್ಲಿ ಜನರ ನೆರವಿಗೆ ನಿಲ್ಲಬೇಕು. ನೆರೆ ಕೇರಳ, ಆಂಧ್ರದ ಶಾಸಕರನ್ನು ಮತ್ತು ಅಲ್ಲಿನ ಸರಕಾರಗಳ ಕ್ರಮಗಳನ್ನು ರಾಜ್ಯದ ಶಾಸಕರು ಮತ್ತು ಸರಕಾರ ಅನುಸರಿಸಬೇಕು. ಭ್ರಷ್ಟಾಚಾರವನ್ನು ಬದಿಗಿಟ್ಟು ನಿಸ್ವಾರ್ಥದಿಂದ ಸೋಂಕಿತರು ಕೊರೋನ ಗೆಲ್ಲಲು ನೆರವು ನೀಡಬೇಕು. ಅಲ್ಲದೆ, ಎಲ್ಲ ಜನರಿಗೆ ಕೊರೋನ ಲಸಿಕೆಯನ್ನು ಉಚಿತವಾಗಿ ನೀಡಲು ಮುಂದಾಗಬೇಕು ಎಂದು ಮಂಜುನಾಥ್ ಅಣ್ಣಯ್ಯ ಒತ್ತಾಯಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News