ಅಧಿಕೃತವಾಗಿ ಲಾಕ್‌ಡೌನ್ ಘೋಷಿಸದೆ ಲಾಕ್‌ಡೌನ್ ಸ್ಥಿತಿ ನಿರ್ಮಿಸಿದ್ದು ಸರಕಾರದ ಕುತಂತ್ರ ಬುದ್ದಿ: ಕಾಂಗ್ರೆಸ್

Update: 2021-04-26 12:16 GMT

ಬೆಂಗಳೂರು, ಎ.26: ತಜ್ಞರು ನೀಡಿದ ವರದಿಗಳನ್ನು ಬಹಿರಂಗಪಡಿಸಲು ಸರ್ಕಾರ ಹಿಂದೇಟು ಹಾಕುತ್ತಿರುವುದೇಕೆ? ಯಡಿಯೂರಪ್ಪ ಅವರೇ, ಬಹಿರಂಗಪಡಿಸಿ ನೋಡೋಣ, ವರದಿಗಳನ್ನು ತಾವು ಎಷ್ಟರ ಮಟ್ಟಿಗೆ ಅನುಷ್ಠಾನಕ್ಕೆ ತಂದಿರುವಿರಿ, ವರದಿಯಲ್ಲಿನ ಯಾವ ಯಾವ ಅಂಶಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದೀರಿ, ಜನತೆಗೆ ತಿಳಿಯಲಿ. ಎಲ್ಲವನ್ನೂ ಮುಚ್ಚಿಟ್ಟು ಕಳ್ಳಾಟ ಆಡುವುದನ್ನು ಬಿಡಿ ಎಂದು ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಅಧಿಕೃತವಾಗಿ ಲಾಕ್‌ಡೌನ್ ಘೋಷಿಸದೆಯೇ ಲಾಕ್‌ಡೌನ್ ಸ್ಥಿತಿ ನಿರ್ಮಿಸುವ ಮೂಲಕ ಚಾಪೆಯ ಕೆಳಗೆ ನುಸುಳುವ ಕುತಂತ್ರ ಬುದ್ದಿ ತೋರುತ್ತಿದೆ ಸರ್ಕಾರ. ಯಡಿಯೂರಪ್ಪ ಅವರೇ, ಈ ಸಮಯದಲ್ಲಿ ಜನತೆಗೆ ನೆರವಿನ ಔದಾರ್ಯತೆ ತೋರಬೇಕೆ ಹೊರತು, ತಂತ್ರಗಾರಿಕೆಯನ್ನಲ್ಲ. ಈಗಾಗಲೇ ಸಾಕಷ್ಟು ಸಂಕಷ್ಟದಲ್ಲಿರುವ ಜನತೆಗೆ ನೆರವಿನ ಪ್ಯಾಕೇಜ್‌ನ್ನು ಕೂಡಲೇ ಬಿಡುಗಡೆಗೊಳಿಸಿ ಎಂದು ಆಗ್ರಹಿಸಿದೆ.

''ಸರ್ಕಾರದ ಕೆಲವು ನಿರ್ಧಾರ ದ್ವಂದ್ವಗಳಿಂದ ಕೂಡಿದೆ. ವಾಹನ ಸಂಚಾರಗಳಿಗೆ ನಿಷೇಧವನ್ನೂ ಹೇರಿದೆ, ಜೊತೆಗೆ ಉತ್ಪಾದನಾ ವಲಯಕ್ಕೆ, ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ನಿರ್ಬಂಧವಿಲ್ಲ ಎನ್ನುತ್ತದೆ. ಸಂಚಾರಕ್ಕೆ ಅವಕಾಶವಿಲ್ಲದೆ ಇದ್ಯಾವೂ ಕಾರ್ಯಚರಿಸುವುದಿಲ್ಲ ಎನ್ನುವ ಕನಿಷ್ಠ ಪ್ರಜ್ಞೆ ಇಲ್ಲವೇ ಅಥವಾ ಅಪವಾದ ತಪ್ಪಿಸಿಕೊಳ್ಳಲು ತಂತ್ರಗಾರಿಕೆಯೇ?''

ಇದು ಬಿಜೆಪಿ ಸರ್ಕಾರ ಕೊರೋನ ನಿರ್ವಹಣೆಯನ್ನು ಗಂಭೀರವಾಗಿ ಪರಿಗಣಿಸದ ಬೇಜವಾಬ್ದಾರಿತನಕ್ಕೆ ಇದೊಂದು ಉದಾಹರಣೆ. ರಾಜ್ಯದಲ್ಲಿ ಬೆಡ್‌ಗಳಿಗಾಗಿ ಹಾಹಾಕಾರವೆದ್ದಿದ್ದರೂ ರೈಲ್ವೆ ಐಸೋಲೇಶನ್ ವಾರ್ಡ್‌ಗಳು ಸಿದ್ಧವಾಗಿದ್ದರೂ ರಾಜ್ಯ ಸರ್ಕಾರ ಬೇಡಿಕೆಯನ್ನೇ ಮುಂದಿಟ್ಟಿಲ್ಲ. ಸುಧಾಕರ್ ಅವರೇ, ನೀವು ಒಂದು ಕ್ಷಣವೂ ಸಚಿವರಾಗಿರಲು ಅನರ್ಹರು ಎಂದು ಟೀಕಿಸಿದೆ.

''ಕೇಂದ್ರ ಸರ್ಕಾರ ಉಚಿತ ಲಸಿಕೆ ನೀಡುವ ಭರವಸೆಯ ಮಾತುಗಳನ್ನಾಡಿ 35,000 ಕೋಟಿಯನ್ನು ಬಜೆಟ್‌ನಲ್ಲಿ ಮೀಸಲಿರಿಸಿತ್ತು. ಆ ಹಣ ಎಲ್ಲಿ ಹೋಯ್ತು ನಿರ್ಮಲಾ ಸೀತಾರಮನ್ ಅವರೇ? ಆ ಭರವಸೆ ಎಲ್ಲಿ ಹೋಯ್ತು ನರೇಂದ್ರ ಮೋದಿ ಅವರೇ? ಯಡಿಯೂರಪ್ಪ ಅವರೇ, ರಾಜ್ಯ ಸರ್ಕಾರ ಕೂಡಲೇ ಸರ್ವರಿಗೂ ಉಚಿತ ಲಸಿಕೆ ನೀಡುವ ಘೋಷಣೆ ಮಾಡಬೇಕು''

''ಬಂಗಾಳದಲ್ಲಿ ಸರ್ಕಾರ ಬಂದರೆ ಉಚಿತ ಲಸಿಕೆ ನೀಡುವ ಭರವಸೆ ನೀಡುತ್ತದೆ ಬಿಜೆಪಿ. ಕರ್ನಾಟಕದಲ್ಲಿ ಬಿಜೆಪಿಯದ್ದೇ ಸರ್ಕಾರವಿದೆ, ಆದರೂ ಉಚಿತ ಲಸಿಕೆಯ ಮಾತಿಲ್ಲ. ಹೆಣದಲ್ಲೂ ಹಣ ಮಾಡುವ, ಚಿತೆಯಲ್ಲಿ ಚಳಿ ಕಾಯಿಸಿಕೊಳ್ಳುವ ಹೀನ ಮನಸ್ಥಿತಿ ಬಿಜೆಪಿ ಎನ್ನುವಂತ ಮಾನಗೆಟ್ಟ ಪಕ್ಷಕ್ಕೆ ಮಾತ್ರ ಇರುವುದು''

ನರೇಂದ್ರ ಮೋದಿ ಅವರೇ, "ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೊಡುವುದು" ಅಂದರೆ ಇದೇ! ಪಿಎಂ ಕೇರ್ಸ್ ಎಂಬ ಖಾಸಗಿ ನಿಧಿ ಸ್ಥಾಪಿಸಿ ಸಂಗ್ರಹವಾದ ಹಣ ಬಳಸದೆ ಕುಳಿತರು 2ನೇ ಅಲೆಯ ಬಗ್ಗೆ ಹಿಂದೆಯೇ ತಜ್ಞರು ನೀಡಿದ ಎಚ್ಚರಿಕೆ ನಿರ್ಲಕ್ಷಿಸಿದವರು ಈಗ ಆಕ್ಸಿಜನ್ ಪ್ಲಾಂಟ್ ಸ್ಥಾಪಿಸುತ್ತಾರಂತೆ! ಇವು ಕಾರ್ಯಾರಂಭವಾಗುವುದು 8ನೇ ಅಲೆಗೊ? 9ನೇ ಅಲೆಗೊ?!

ತಜ್ಞರ ಸಲಹೆಗಳನ್ನಲ್ಲದೆ ಸಂಸದೀಯ ಸಮಿತಿಯ ಸಲಹೆಯನ್ನೂ ನಿರ್ಲಕ್ಷಿಸಿ ಆಮ್ಲಜನಕ ದಾಸ್ತಾನಿನ ಬಗ್ಗೆ ಕೊಂಚವೂ ಯೋಚಿಸದೆ ನರೇಂದ್ರ ಮೋದಿ  ಸರ್ಕಾರ ಕೊರೋನ ಸಂದರ್ಭದಲ್ಲಿ ಅತಿ ಹೆಚ್ಚು ಆಕ್ಸಿಜನ್ ವಿದೇಶಗಳಿಗೆ ರಫ್ತು ಮಾಡಿತ್ತು. ಬಿಜೆಪಿ ಕೊರೋನ ಗೆದ್ದೇಬಿಟ್ಟೆವು ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದರ ಪರಿಣಾಮವೇ ಇಂದಿನ ಸಾವು, ನೋವುಗಳು ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News