×
Ad

ನ್ಯಾ.ಶಾಂತನಗೌಡರ್ ಸ್ಮರಣಾರ್ಥ ಹೈಕೋರ್ಟ್ ಸೇರಿ ರಾಜ್ಯದ ಎಲ್ಲ ನ್ಯಾಯಾಲಯಗಳ ಕಲಾಪ ರದ್ದು

Update: 2021-04-26 18:31 IST
ನ್ಯಾ.ಶಾಂತನಗೌಡರ್

ಬೆಂಗಳೂರು, ಎ.26: ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಹಾಗೂ ಕನ್ನಡಿಗ ಮೋಹನ್ ಎಂ. ಶಾಂತನಗೌಡರ ಅವರು ವಿಧಿವಶರಾದ ಹಿನ್ನೆಲೆಯಲ್ಲಿ ಗೌರವಾರ್ಥ ಸಂತಾಪ ಸೂಚಿಸಲು ಹೈಕೋರ್ಟ್ ಪೀಠಗಳು ಸೇರಿದಂತೆ ರಾಜ್ಯದ ಎಲ್ಲ ನ್ಯಾಯಾಲಯಗಳ ವಿಚಾರಣೆಯನ್ನು ರದ್ದುಪಡಿಸಿ ಹೈಕೋರ್ಟ್ ಆದೇಶಿಸಿದೆ.

ಈ ಕುರಿತು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರ ಆದೇಶದಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಟಿ.ಜಿ.ಶಿವಶಂಕರೇಗೌಡ ಅವರು ನೋಟಿಫಿಕೇಷನ್ ಹೊರಡಿಸಿದ್ದಾರೆ. ಅದರಂತೆ ಇಂದು ರಾಜ್ಯ ಹೈಕೋರ್ಟ್‍ನ ಬೆಂಗಳೂರು ಪ್ರಧಾನ ಪೀಠ, ಕಲಬುರಗಿ, ಧಾರವಾಡ ಪೀಠಗಳು ಸೇರಿದಂತೆ ರಾಜ್ಯದ ಎಲ್ಲ ನ್ಯಾಯಾಲಯಗಳ ಕಲಾಪವನ್ನು ರದ್ದುಪಡಿಸಲಾಗಿದೆ. ಎ.26ರಂದು ನಡೆಯಬೇಕಿದ್ದ ಎಲ್ಲ ಪ್ರಕರಣಗಳ ವಿಚಾರಣೆಯನ್ನು ಎ.27ಕ್ಕೆ ನಿಗದಿಪಡಿಸಲಾಗಿದೆ.

ವಿಶೇಷ ಪೀಠವೂ ರದ್ದು: ಸಾರಿಗೆ ನೌಕರರು ನಡೆಸಿದ್ದ ಮುಷ್ಕರ ಹಾಗೂ ಕಾರ್ಮಿಕರನ್ನು ವಜಾಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಲು ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಶೇಷ ಪೀಠ ಎ.26ರಂದು ಕಲಾಪ ನಡೆಸಬೇಕಿತ್ತು. ಆನ್ ಲೈನ್ ಮೂಲಕ ನಡೆಯಲಿದ್ದ ಅರ್ಜಿ ವಿಚಾರಣೆಗೆ ಸಾರಿಗೆ ಇಲಾಖೆ ಹಿರಿಯ ಅಧಿಕಾರಿಗಳು ವರ್ಚುವಲ್ ಕೋರ್ಟ್ ಮೂಲಕ ಹಾಜರಿದ್ದರು.

ಅಡ್ವಕೇಟ್ ಜನರಲ್ ಕೂಡ ಆನ್ ಲೈನ್‍ನಲ್ಲಿ ಸರಕಾರದ ನಿಲುವು ತಿಳಿಸಲು ಸಿದ್ಧರಿದ್ದರು. ಆದರೆ. ರಜಾ ಕಾಲದ ವಿಶೇಷ ಪೀಠ ರದ್ದಾದ ಹಿನ್ನೆಲೆಯಲ್ಲಿ ಪ್ರಕರಣವನ್ನು ಎ.27ಕ್ಕೆ ಮುಂದೂಡಲಾಗಿದೆ.

ಸುಪ್ರೀಂ ಕಾರ್ಯಕಲಾಪಗಳು ರದ್ದು: ಇತ್ತೀಚೆಗೆ ಅನಾರೋಗ್ಯದಿಂದ ನಿಧನರಾದ ನ್ಯಾಯಮೂರ್ತಿ ಮೋಹನ್ ಶಾಂತನಗೌಡರ್ ಸ್ಮರಣಾರ್ಥ ಎ.26ರಂದು ಸುಪ್ರೀಂಕೋರ್ಟ್ ಕಾರ್ಯ ಕಲಾಪಗಳನ್ನು ರದ್ದುಗೊಳಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News