ಜ್ಯೋತಿ ಸಂಜೀವಿನಿ ಅನುದಾನಿತ, ಅನುದಾನ ರಹಿತ ನೌಕರರಿಗೂ ವಿಸ್ತರಿಸಿ: ಶಿಕ್ಷಕರ ಒಕ್ಕೂಟದಿಂದ ಮನವಿ
ಬೆಂಗಳೂರು, ಎ.26: ಸರಕಾರಿ ನೌಕರರಿಗೆ ನೀಡುತ್ತಿರುವ ಜ್ಯೋತಿ ಸಂಜೀವಿನಿ ಸೌಲಭ್ಯವನ್ನು ರಾಜ್ಯ ಅನುದಾನಿತ-ಅನುದಾನರಹಿತ ನೌಕರರಿಗೂ ವಿಸ್ತರಿಸುವಂತೆ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ಪಿ.ಕರಬಸಪ್ಪ ಅವರು ಸಚಿವ ಎಸ್.ಸುರೇಶ್‍ಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಅನೇಕ ಸಾರಿ ಹೋರಾಟ ನಡೆಸಿ, ಮನವಿಗಳನ್ನು ಸಲ್ಲಿಸುತ್ತಾ ಬಂದಿದ್ದು, ಆದರೆ ಆರ್ಥಿಕ ಇಲಾಖೆಯ ಕಠಿಣ ಧೋರಣೆಯಿಂದಾಗಿ ಆದೇಶವಾಗದೆ ನೌಕರರುಗಳಿಗೆ ತುಂಬಾ ಅನ್ಯಾಯವಾಗಿದ್ದು, ಹೀಗಾಗಿ ಈ ಸೌಲಭ್ಯವನ್ನು ಜಾರಿಗೊಳಿಸುವಂತೆ ಪತ್ರಿಕಾ ಹೇಳಿಕೆ ಮೂಲಕ ಆಗ್ರಹಪಡಿಸಿದ್ದಾರೆ.
ಅನುದಾನರಹಿತ ಶಿಕ್ಷಕರಿಗೆ ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ನಿಧಿಗೆ ಸದಸ್ಯತ್ವ ನೀಡಲು ಒಪ್ಪಿಗೆ ನೀಡಿರುವ ಸಚಿವ ಸುರೇಶ್ ಕುಮಾರ್ ಅವರಿಗೆ ಧನ್ಯವಾದ ಅರ್ಪಿಸಿರುವ ಇವರು, ಜ್ಯೋತಿ ಸಂಜೀವಿನಿ ಸೌಲಭ್ಯವು ಸರಕಾರಿ ನೌಕರರಿಗೆ ಮಾತ್ರ ಇದ್ದು, ನಾವೂ ಸಹ ಸರಕಾರಿ ನೌಕರರಂತೆ ಕರ್ತವ್ಯ ನಿರ್ವಹಿಸುತ್ತಿದ್ದು, ಹೀಗಾಗಿ, ತಾವೇ ಈ ಬಗ್ಗೆ ಆಸಕ್ತಿ ವಹಿಸಿ, ಮುಖ್ಯಮಂತ್ರಿಗಳ ಮನವೊಲಿಸಿ, ಸರಕಾರಿ ನೌಕರರಿಗಿರುವ ಜ್ಯೋತಿ ಸಂಜೀವಿನಿ ಸೌಲಭ್ಯವನ್ನು ಅನುದಾನಿತ/ ಅನುದಾನರಹಿತ ನೌಕರರಿಗೂ ವಿಸ್ತರಿಸಿ ಅನುಕೂಲ ಮಾಡಿಕೊಡಬೇಕು. ಕೊರೋನ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿ ಮೃತಪಟ್ಟ ನೌಕರರ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಕೋರಿದ್ದಾರೆ.