ತಬ್ರೇಝ್ ಅನ್ಸಾರಿ ಹತ್ಯೆ ಪ್ರಕರಣ: ಜಾರ್ಖಂಡ್ ಮುಖ್ಯ ಕಾರ್ಯದರ್ಶಿಗೆ ಮಾನವ ಹಕ್ಕುಗಳ ಆಯೋಗದಿಂದ ಶೋಕಾಸ್ ನೋಟಿಸ್
ಬೆಂಗಳೂರು, ಎ.26: ಜಾರ್ಖಂಡ್ ರಾಜ್ಯದ ಸರಾಯ್‌ಕೇಲಾ ಖರ್ಸಾವನ್ ಜಿಲ್ಲೆಯಲ್ಲಿ ಮುಹಮ್ಮದ್ ತಬ್ರೇಝ್ ಅನ್ಸಾರಿ(24) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಜಾರ್ಖಂಡ್ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ ಎಂದು ಕಲಬುರಗಿ ಜಿಲ್ಲೆಯ ಮಾನವ ಹಕ್ಕುಗಳ ಹೋರಾಟಗಾರ ಮುಹಮ್ಮದ್ ರಿಯಾಝುದ್ದೀನ್ ತಿಳಿಸಿದ್ದಾರೆ.
ವಾರ್ತಾಭಾರತಿಯೊಂದಿಗೆ ಮಾತನಾಡಿದ ಅವರು, ಕಳೆದ ಸಾಲಿನ ಜುಲೈನಲ್ಲಿ ಜಾರ್ಖಂಡ್ ಸರಕಾರ ತಬ್ರೇಝ್ ಅನ್ಸಾರಿ ಕುಟುಂಬಕ್ಕೆ 2 ಲಕ್ಷ ರೂ.ಗಳ ಪ್ರಾಥಮಿಕ ಪರಿಹಾರವನ್ನು ನೀಡಲಾಗಿದೆ. ಇದೀಗ ಇನ್ನೂ ಹೆಚ್ಚುವರಿಯಾಗಿ 2 ಲಕ್ಷ ರೂ.ಗಳ ಪರಿಹಾರವನ್ನು ನೀಡುವಂತೆ ಜಾರ್ಖಂಡ್ ಸರಕಾರಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನಿರ್ದೇಶನ ನೀಡಿದೆ ಎಂದರು.
ಮಾನವ ಹಕ್ಕುಗಳ ಆಯೋಗದ ಸೂಚನೆ ಅನ್ವಯ 13 ಜನರ ವಿರುದ್ಧ ಆರೋಪ ಪಟ್ಟಿ ದಾಖಲು ಮಾಡಲಾಗಿದ್ದು, ಈ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಇಲಾಖಾವಾರು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಮ್ಶೇಡ್‌ಪುರದ ಪೊಲೀಸ್ ವರಿಷ್ಠಾಧಿಕಾರಿಗೆ ಮಾನವ ಹಕ್ಕುಗಳ ಆಯೋಗ ಸೂಚನೆ ನೀಡಿತ್ತು ಎಂದು ಅವರು ತಿಳಿಸಿದರು.
ಶಿಸ್ತು ಕ್ರಮದ ಹಿನ್ನೆಲೆಯಲ್ಲಿ ಎಎಸ್ಸೈ ವಿಪಿನ್ ಬಿಹಾರಿಯನ್ನು 2019ರ ಜೂ.24ರಂದು ಅಮಾನತು ಮಾಡಿ, ಶೇ.50ರಷ್ಟು ಭತ್ತೆಯನ್ನು ಕಡಿತಗೊಳಿಸಲಾಗಿದೆ. ಜೊತೆಗೆ ಎಸ್ಸೈ ಚಂದರ್ ಮೋಹನ್‌ಗೂ ಶಿಕ್ಷೆ ವಿಧಿಸಲಾಗಿದೆ. ಠಾಣೆಯ ಎಸ್‌ಎಚ್‌ಒ ಅವರಿಗೆ ಆರು ತಿಂಗಳು ಭಡ್ತಿ ನೀಡದಂತೆ ತಡೆ ಹಿಡಿಯಲಾಗಿದೆ ಎಂದು ರಿಯಾಝುದ್ದೀನ್ ಹೇಳಿದರು.
ಏನಿದು ಪ್ರಕರಣ?: ಮುಹಮ್ಮದ್ ತಬ್ರೇಝ್ ಅನ್ಸಾರಿ ಗುಂಪು ಹಲ್ಲೆಗೊಳಗಾಗಿ ಮೃತಪಟ್ಟಿರುವುದಾಗಿ ಮುಹಮ್ಮದ್ ರಿಯಾಝುದ್ದೀನ್ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿ, ಘಟನೆಗೆ ಕಾರಣಕರ್ತರಾದ ಆರೋಪಿಗಳನ್ನು ಬಂಧಿಸಿ, ನಿರ್ಲಕ್ಷ್ಯ ತೋರಿದ ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸಿ ಕೆಲಸದಿಂದ ವಜಾಗೊಳಿಸುವಂತೆ ಮನವಿ ಸಲ್ಲಿಸಿದ್ದರು. ಅಲ್ಲದೆ, ಇಂತಹ ಘಟನೆಗಳು ನಡೆದಾಗ ಸಂತ್ರಸ್ತರ ಕುಟುಂಬಗಳಿಗೆ ಒಂದು ಕೋಟಿ ರೂ. ಪರಿಹಾರ ನೀಡುವಂತೆಯೂ ಬೇಡಿಕೆ ಸಲ್ಲಿಸಿದ್ದರು.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸೂಚನೆಯಂತೆ ಕಳೆದ ಸಾಲಿನ ಅ.19ರಂದು ಸರಾಯ್‌ಕೇಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕರಣದ ಕುರಿತು ವರದಿ ನೀಡಿದ್ದು, 2019ರ ಜೂ.18ರಂದು ಸಂತ್ರಸ್ತ ಯುವಕನನ್ನು ಕಳ್ಳತನದ ಆರೋಪದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಆತನ ಇಬ್ಬರು ಸಹಚರರು ತಪ್ಪಿಸಿಕೊಂಡಿದ್ದರು. ಆತನ ಗಾಯಗಳಿಗೆ ಸಂಬಂಧಿಸಿದಂತೆ ದೂರಿನಲ್ಲಿ, ಆಸ್ಪತ್ರೆಯ ದಾಖಲೆಗಳಲ್ಲಿ ಅಥವಾ ನ್ಯಾಯಾಲಯದ ದಾಖಲೆಗಳಲ್ಲಿ ಎಲ್ಲಿಯೂ ಉಲ್ಲೇಖವಿಲ್ಲ ಎಂದು ತಿಳಿಸಿದ್ದಾರೆ.
ಸಂತ್ರಸ್ತ ಯುವಕ ಜೂ.18 ರಿಂದ 22ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದ. ಜೂ.22ರಂದು ಆತನ ಪರಿಸ್ಥಿತಿ ಹದಗೆಟ್ಟಿದ್ದರಿಂದ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಚಿಕಿತ್ಸೆ ಮುಂದುವರೆಯುತ್ತಿದ್ದ ವೇಳೆ ಆತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮೃತ ಯುವಕನ ಪತ್ನಿಯ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ಎಫ್‌ಐಆರ್ ಹಾಕಿದ್ದಾರೆ. 13 ಮಂದಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಯುವಕನ ಮೇಲೆ ಹಲ್ಲೆ ನಡೆಸುತ್ತಿರುವುದು ಎನ್ನಲಾದ ವಿಡಿಯೋವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ವರದಿಯ ನಿರೀಕ್ಷೆಯಲ್ಲಿದ್ದೇವೆ. ಸಂತ್ರಸ್ತ ಯುವಕನನ್ನು ಜಿಲ್ಲೆಯ ಸರ್ದಾರ್ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಆತ ಆರೋಗ್ಯದಿಂದಿದ್ದ. ಆನಂತರವಷ್ಟೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಈ ಅವಧಿಯಲ್ಲಿ ಮ್ಯಾಜಿಸ್ಟ್ರೇಟ್ ಎದುರು ಆತ ಯಾವುದೇ ಆರೋಪವನ್ನು ಮಾಡಿಲ್ಲ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ನಾಲ್ಕು ದಿನಗಳ ನಂತರ ಮೃತಪಟ್ಟಿರುವುದರಿಂದ, ಪೊಲೀಸ್ ಕಸ್ಟಡಿಯಲ್ಲಿ ಆತನ ಮೃತ್ಯುವಾಗಿಲ್ಲ ಎಂಬುದು ಸ್ಪಷ್ಟ ಎಂದು ವರದಿಯಲ್ಲಿ ಹೇಳಲಾಗಿದೆ.
ಆದಾಗ್ಯೂ, ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಸ್ತು ಕ್ರಮದ ಹಿನ್ನೆಲೆಯಲ್ಲಿ ಎಎಸ್ಸೈ ವಿಪಿನ್ ಬಿಹಾರಿಯನ್ನು 2019ರ ಜೂ.24ರಂದು ಅಮಾನತು ಮಾಡಿ, ಶೇ.50ರಷ್ಟು ಭತ್ತೆಯನ್ನು ಕಡಿತಗೊಳಿಸಲಾಗಿದೆ. ಅದೇ ರೀತಿ ಎಸ್ಸೈ ಚಂದರ್ ಮೋಹನ್‌ಗೂ ಶಿಕ್ಷೆ ವಿಧಿಸಲಾಗಿದೆ. ಠಾಣೆಯ ಎಸ್‌ಎಚ್‌ಒ ಅವರಿಗೆ ಆರು ತಿಂಗಳು ಭಡ್ತಿ ನೀಡದಂತೆ ತಡೆ ಹಿಡಿಯಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.