×
Ad

ಆಕ್ಸಿಜನ್, ಔಷಧಿ ಅಕ್ರಮ ದಾಸ್ತಾನು ಮಾಡಿದರೆ ಕಠಿಣ ಕ್ರಮ: ಸಚಿವ ಡಾ.ಕೆ.ಸುಧಾಕರ್ ಎಚ್ಚರಿಕೆ

Update: 2021-04-26 20:22 IST

ಬೆಂಗಳೂರು, ಎ.26: ದೇಶದಲ್ಲಿ ಈಗ ಕೋವಿಡ್ ಎರಡನೆ ಅಲೆ ಇದೆ. ಕೆಲವು ದೇಶಗಳಲ್ಲಿ ಈಗಾಗಲೆ ಮೂರನೆ ಮತ್ತು ನಾಲ್ಕನೆ ಅಲೆ ಆರಂಭವಾಗಿದೆ. ಎರಡನೆ ಅಲೆಯ ಅಬ್ಬರ 30 ರಿಂದ 40 ದಿನಗಳ ವರೆಗೆ ಇರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಸೋಮವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಸೋಂಕು ದೃಢಪಡುತ್ತಿದ್ದಂತೆ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಎಲ್ಲರೂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವ ಅಗತ್ಯವಿಲ್ಲ. ಅನಗತ್ಯವಾಗಿ ಆಸ್ಪತ್ರೆಗೆ ದಾಖಲಾಗುವುದರಿಂದ, ಅಗತ್ಯ ಇರುವಂತಹ ರೋಗಿಗಳಿಗೆ ಹಾಸಿಗೆ ಹಾಗೂ ಆಕ್ಸಿಜನ್ ಲಭ್ಯವಾಗದ ಪರಿಸ್ಥಿತಿಯೂ ನಿರ್ಮಾಣವಾಗುತ್ತಿದೆ ಎಂದರು.

ಹಣ ಸಂಪಾದನೆ ಅಥವಾ ದುರುದ್ದೇಶದಿಂದ ಯಾರಾದರೂ ಆಕ್ಸಿಜನ್ ಅಥವಾ ರೆಮ್‍ಡಿಸಿವಿರ್ ಸೇರಿದಂತೆ ಯಾವುದೇ ಔಷಧಿಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದು ಕಂಡು ಬಂದಲ್ಲಿ ಅಥವಾ ಕಾಳಸಂತೆಯಲ್ಲಿ ಮಾರುವಂತಹ ಪ್ರಕರಣಗಳು ಕಂಡು ಬಂದರೆ ಕಾನೂನಾತ್ಮಕವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ವಿಚಾರದಲ್ಲಿ ಈಗಾಗಲೆ ಗೃಹ ಇಲಾಖೆಗೂ ಮನವಿ ಮಾಡಿದ್ದೇವೆ. ಅಲ್ಲದೆ, ನಮ್ಮ ಇಲಾಖೆಯಿಂದಲೂ ವಿಚಕ್ಷಣ ದಳ ನೇಮಿಸಿ ಕ್ರಮ ಕೈಗೊಂಡಿದ್ದೇವೆ. ರಾಜ್ಯದಲ್ಲಿ ಆಕ್ಸಿಜನ್, ರೆಮ್‍ಡಿಸಿವಿರ್ ಕೊರತೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಬಹಳ ಜನರ ನೋವು, ಸಂಕಟ ನನಗೆ ಅರ್ಥ ಆಗುತ್ತದೆ. ಆದರೆ, ಈ ಸಾಂಕ್ರಾಮಿಕ ರೋಗ ನಮಗೆ ಗರಬಡಿದಂತೆ ಆಗಿದೆ. ಈ ಸಾಂಕ್ರಾಮಿಕ ನಮ್ಮ ನಿರೀಕ್ಷೆಯನ್ನು ಮೀರಿ ಹೋಗಿದೆ. ಅಂಕಿ ಸಂಖ್ಯೆಗಳನ್ನು ನೋಡಿದರೆ ಅನೇಕ ದೇಶಗಳು ಕೋವಿಡ್ ಎರಡನೆ ಅಲೆಯಲ್ಲಿ ಶೇ.200 ರಿಂದ 500ರಷ್ಟು ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ. ನಮ್ಮ ದೇಶದಲ್ಲಿ ನೋಡಿದರೆ ಮೊದಲನೆ ಅಲೆಗೆ ಹೋಲಿಕೆ ಮಾಡಿದರೆ ಈಗಾಗಲೆ ಶೇ.267ರಷ್ಟು ಹೆಚ್ಚಾಗಿದೆ. ಆದುದರಿಂದ, ನಾವು ಗಂಭೀರವಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಸುಧಾಕರ್ ಹೇಳಿದರು.

ರಾಜ್ಯ ಸರಕಾರ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡಿದೆ. ಲಾಕ್‍ಡೌನ್ ಸೇರಿದಂತೆ ಎಲ್ಲ ಸಾಧಕ ಬಾಧಕಗಳನ್ನು ಅರ್ಥ ಮಾಡಿಕೊಂಡಿದ್ದೇವೆ. ಕೋವಿಡ್ ಹಿನ್ನೆಲೆಯಲ್ಲಿ ನಮ್ಮ ಅನಿವಾರ್ಯತೆಯನ್ನು ಅರ್ಥ ಮಾಡಿಕೊಂಡಿದ್ದೇವೆ. ಕೋವಿಡ್‍ಗೂ ರಾಜಕಾರಣಕ್ಕೂ ಸಂಬಂಧ ಇಲ್ಲ. ರಾಜಕೀಯ ಹಿನ್ನೆಲೆಯಲ್ಲಿ ನಮ್ಮ ಸರಕಾರ ಯಾವುದೆ ನಿರ್ಧಾರ ಕೈಗೊಳ್ಳುವುದಿಲ್ಲ. ವೈಜ್ಞಾನಿಕ ನೆಲೆಗಟ್ಟಿನಲ್ಲಿ ತಜ್ಞರ ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಂಡೇ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದೇವೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಮೇ 1 ರಿಂದ 18-44 ವರ್ಷದೊಳಗಿನ ನಾಗರಿಕರಿಗೆ ಎಲ್ಲ ಸರಕಾರಿ ಲಸಿಕಾ ಕೇಂದ್ರಗಳಲ್ಲಿ ಉಚಿತವಾಗಿ ಕೊರೋನ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಎಲ್ಲ ಅರ್ಹ ವ್ಯಕ್ತಿಗಳು ಎಪ್ರಿಲ್ 28 ರಿಂದ ಲಸಿಕೆ ಪಡೆಯಲು ತಪ್ಪದೆ ನೋಂದಣಿ ಮಾಡಿಕೊಳ್ಳಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News