×
Ad

ನಟಿ ಮಾಲಾಶ್ರೀ ಪತಿ, ಖ್ಯಾತ ನಿರ್ಮಾಪಕ ರಾಮು ಕೋವಿಡ್ ನಿಂದ ನಿಧನ

Update: 2021-04-26 20:38 IST

ಬೆಂಗಳೂರು, ಎ.26: ಕನ್ನಡ ಚಿತ್ರರಂಗದ ಕೋಟಿ ನಿರ್ಮಾಪಕ ಎಂದೇ ಖ್ಯಾತಿ ಪಡೆದಿರುವ ನಿರ್ಮಾಪಕ, ಕನಸಿನ ರಾಣಿ ಎಂದು ಹೆಸರಾಗಿರುವ ನಟಿ ಮಾಲಾಶ್ರೀ ಅವರ ಪತಿ ರಾಮು(52) ಅವರು ಕೊರೋನ ಸೋಂಕಿನಿಂದ ನಿಧನರಾಗಿದ್ದಾರೆ.

ಇತ್ತೀಚಿಗೆ ಅವರಿಗೆ ಸೋಂಕು ದೃಢಪಟ್ಟಿದ್ದು, ತದನಂತರ, ಉಸಿರಾಟದ ಸಮಸ್ಯೆಗೆ ಒಳಗಾಗಿದ್ದ ಅವರನ್ನು ಇಲ್ಲಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಸೋಮವಾರ ಸಂಜೆ ಅಸುನೀಗಿದ್ದಾರೆ.

ತುಮಕೂರು ಜಿಲ್ಲೆ ಕುಣಿಗಲ್ ಮೂಲದ ರಾಮು ಅವರು ಕನ್ನಡ ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು. ಕನ್ನಡದ ಪ್ರಖ್ಯಾತ ನಟರ ಸಿನಿಮಾಗಳಿಗೆ ಅವರು ಬಂಡವಾಳ ಹೂಡಿ ಕೋಟಿ ನಿರ್ಮಾಪಕ ರಾಮು ಎಂದು ಹೆಸರು ಪಡೆದುಕೊಂಡಿದ್ದರು.

ಚೈತ್ರದ ಪ್ರೇಮಾಂಜಲಿ ಚಿತ್ರದ ಹಂಚಿಕೆಯಿಂದ ಪ್ರವರ್ಧಮಾನಕ್ಕೆ ಬಂದ ರಾಮು, ಅಧಿಪತಿ ಚಿತ್ರದಿಂದ ನಿರ್ಮಾಪಕರಾದರು. ಆನಂತರ ರಾಜಕೀಯ ಸಿನಿಮಾ ಮೂಲಕ ನಿರ್ಮಾಪಕರಾದ ಅವರು ಬಳಿಕ ಗೋಲಿಬಾರ್, ಲಾಕಪ್ ಡೆತ್ ಚಿತ್ರಗಳ ಮೂಲಕ ಯಶಸ್ಸು ಹಾಗೂ ಜನಪ್ರಿಯತೆ ಗಳಿಸಿದರು. ಕಲಾಸಿಪಾಳ್ಯ, ಸಿಬಿಐ ದುರ್ಗಾ, ಎಕೆ-47, ಹಾಲಿವುಡ್, ಮುತ್ತಿನಂಥ ಹೆಂಡತಿ, ಹಲೋ ಸಿಸ್ಟರ್ ಮುಂತಾದ ಚಿತ್ರಗಳನ್ನು ಅವರು ನಿರ್ಮಾಣ ಮಾಡಿದ್ದರು.

ಪ್ರಜ್ವಲ್ ದೇವರಾಜ್ ಅಭಿನಯದ ‘ಅರ್ಜುನ್ ಗೌಡ' ಚಿತ್ರಕ್ಕೆ ಅವರು ಬಂಡವಾಳ ಹೂಡಿದ್ದು, ಅದು ನಿರ್ಮಾಣ ಹಂತದಲ್ಲಿ ಇರುವಾಗಲೇ ಇನ್ನಿಲ್ಲವಾಗಿದ್ದಾರೆ.

ಚಿತ್ರರಂಗ ಕಂಬನಿ: ಕನ್ನಡ ಚಿತ್ರಗಳನ್ನು ಪರಭಾಷೆ ಚಿತ್ರರಂಗದ ಮಟ್ಟಿಗೆ ನಿರ್ಮಾಣ ಮಾಡುವ ಹೆಗ್ಗಳಿಕೆ ಹೊಂದಿದ್ದ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ನಾಯಕರು, ಕಲಾವಿದರು, ರಾಜಕೀಯ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ.

ಕನ್ನಡ ಚಲನಚಿತ್ರರಂಗದಲ್ಲಿ 30ಕ್ಕೂ ಹೆಚ್ಚು ಸಿನೆಮಾಗಳನ್ನು ನಿರ್ಮಾಣ ಮಾಡಿದ್ದ ರಾಮು ಅವರು, ಚಿತ್ರಗಳಿಗೆ ಕೋಟಿಗಟ್ಟಲೆ ಬಂಡವಾಳ ಹೂಡುವ ಮೂಲಕ ಕೋಟಿ ನಿರ್ಮಾಪಕ ಎಂಬ ಖ್ಯಾತಿ ಪಡೆದಿದ್ದಾರೆ. ಅವರ ನಿಧನದಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾದಂತಾಗಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಕಂಬನಿ ಮಿಡಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News