×
Ad

ಸ್ಯಾಚುರೇಶನ್ 94ಕ್ಕಿಂತ ಕಡಿಮೆ ಇದ್ದರೆ ಮಾತ್ರ ಆಸ್ಪತ್ರೆಗೆ ದಾಖಲಾಗಿ: ತಜ್ಞ ವೈದ್ಯ ಡಾ.ರವಿ

Update: 2021-04-26 20:50 IST

ಬೆಂಗಳೂರು, ಎ.26: ಆರ್‍ಟಿಪಿಸಿಆರ್ ವರದಿಯಲ್ಲಿ ಕೋವಿಡ್ ಪಾಸಿಟಿವ್ ಬರುತ್ತಿದ್ದಂತೆ ಯಾರೊಬ್ಬರೂ ಗಾಬರಿಯಾಗುವ ಅಗತ್ಯವಿಲ್ಲ. ಶೇ.85-90ರಷ್ಟು ಪಾಸಿಟಿವ್ ರೋಗಿಗಳಿಗೆ ಆಸ್ಪತ್ರೆಗೆ ದಾಖಲಿಸುವ ಅಗತ್ಯವಿಲ್ಲ. ಅವರು ಮನೆಯಲ್ಲೆ ಅಥವಾ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಐಸೋಲೇಟ್ ಆಗಿ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ತಜ್ಞ ವೈದ್ಯ ಡಾ.ರವಿ ತಿಳಿಸಿದರು.

ಸೋಮವಾರ ವಿಧಾನಸೌಧದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಅವರ ಜೊತೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆರ್‍ಟಿಪಿಸಿಆರ್ ವರದಿಯಲ್ಲಿ ಕೋವಿಡ್ ಪಾಸಿಟಿವ್ ಎಂದು ಬರುತ್ತಿದ್ದಂತೆ ಸಾರ್ವಜನಿಕರು ಗಾಬರಿಯಾಗಿ ಆಸ್ಪತ್ರೆಗಳಿಗೆ ದಾಖಲು ಮಾಡಿಕೊಳ್ಳುವಂತೆ ಬೇಡಿಕೆ ಇಡುತ್ತಿರುವುದನ್ನು ನಾವು ಕಾಣುತ್ತಿದ್ದೇವೆ ಎಂದರು.

ಕೋವಿಡ್ ಸೋಂಕಿತರ ಪೈಕಿ ಯಾರನ್ನು ಆಸ್ಪತ್ರೆಗಳಿಗೆ ದಾಖಲಿಸಿಕೊಳ್ಳಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮಾರ್ಗಸೂಚಿಗಳಿವೆ. ಆರ್‍ಟಿಪಿಸಿಆರ್ ನಲ್ಲಿ ಪಾಸಿಟಿವ್ ಬಂದರೆ ಅಂತಹವರಿಗೆ ಜ್ವರ, ಕೆಮ್ಮು, ಮೈ, ಕೈ ನೋವು, ರುಚಿ ಗೊತ್ತಾಗದೆ ಇರುವಂತಹ ಲಕ್ಷಣಗಳು ಇರುತ್ತವೆ. ಅಂತಹ ರೋಗಿಗಳು ತಮ್ಮ ಮನೆಗಳಲ್ಲೆ ಐಸೋಲೇಟ್ ಆಗಬೇಕು, ಪ್ರತ್ಯೇಕವಾಗಿರಬೇಕು. ಮನೆಯಲ್ಲಿ ಅನುಕೂಲ ಇಲ್ಲದಿದ್ದರೆ ಸರಕಾರದ ಕೋವಿಡ್ ಕೇರ್ ಸೆಂಟರ್ ಗಳಿಗೆ ದಾಖಲಾಗಿ ಐಸೋಲೇಟ್ ಆಗಿ ಚಿಕಿತ್ಸೆ ಪಡೆಯಬಹುದು. ಐದು ದಿನಗಳ ಕಾಲ ಪ್ಯಾರಾಸಿಟಮಲ್ ಮಾತ್ರೆ ತೆಗೆದುಕೊಳ್ಳಬೇಕು. ಚೆನ್ನಾಗಿ ಆಹಾರ ಸೇವಿಸಬೇಕು, ಬಿಸಿ ನೀರು ಕುಡಿಯಬೇಕು ಎಂದು ಅವರು ಹೇಳಿದರು.

ರೆಮ್‍ಡಿಸಿವಿರ್-ಆಕ್ಸಿಜನ್ ಅಗತ್ಯವಿಲ್ಲ: ಕೋವಿಡ್ ಪಾಸಿಟಿವ್ ಬಂದಂತಹ ಎಲ್ಲ ಸೋಂಕಿತರಿಗೂ ರೆಮ್‍ಡಿಸಿವಿರ್ ಚುಚ್ಚು ಮದ್ದು ಹಾಗೂ ಆಕ್ಸಿಜನ್ ಅಗತ್ಯ ಇರೋದಿಲ್ಲ. ಮನೆಯಲ್ಲಿ ಐಸೋಲೇಟ್ ಆಗಿರುವವರಿಗೆ ಯಾರಾದರೂ ಸುಶಿಕ್ಷಿತರು ಇದ್ದರೆ ಅವರೇ ಆರೈಕೆ ಮಾಡಬಹುದು. ಜ್ವರ ಇದ್ದರೆ ಪ್ಯಾರಸಿಟಮಲ್ ಮಾತ್ರೆ ನೀಡಬೇಕು. ಆಕ್ಸಿಮಿಟರ್ ನಲ್ಲಿ ಸ್ಯಾಚುರೇಷನ್ ಪ್ರಮಾಣ 94ಕ್ಕಿಂತ ಕಡಿಮೆ ಆದಾಗ ಮಾತ್ರ ವೈದ್ಯರನ್ನು ಕಾಣುವುದು ಉತ್ತಮ. ಅದಕ್ಕಿಂತ ಮುನ್ನ ಮನೆಯಲ್ಲೆ 6 ನಿಮಿಷ ನಡೆದಾಡಬೇಕು. ವಯಸ್ಸಾದವರೂ ಇದ್ದರೆ 3 ನಿಮಿಷ ನಡೆದಾಡಬೇಕು. ಆಗಲೂ ಸ್ಯಾಚುರೇಷನ್ ಕುಸಿತ ಆಗಿಲ್ಲ ಎಂದರೆ ಯಾವುದೆ ಸಮಸ್ಯೆ ಇಲ್ಲ ಎಂದರ್ಥ ಎಂದು ರವಿ ತಿಳಿಸಿದರು.

ಜ್ವರ ಇದ್ದಾಗ ಒಂದು ದಿನಕ್ಕೆ ಮೂರರಿಂದ ನಾಲ್ಕು ಪ್ಯಾರಸಿಟಮಲ್ ಮಾತ್ರೆ ತೆಗೆದುಕೊಳ್ಳಬಹುದು. ಇಮ್ಯೂನಿಟಿ ಹೆಚ್ಚಿಸಲು ಝಿಂಕ್ ಮಾತ್ರೆ, ಮಿಟಮಿನ್ ಸಿ ಮಾತ್ರೆಗಳನ್ನು ನೀಡಲಾಗುತ್ತಿದೆ. ಅದನ್ನು ಸೇವಿಸಬೇಕು. ಬಿಸಿನೀರಿನಲ್ಲಿ ಉಪ್ಪು ಹಾಕಿ ಬಾಯಿ ಮುಕ್ಕಳಿಸಬೇಕು. ಸ್ಯಾಚುರೇಷನ್ ಕುಸಿತ ಆದ ಕೂಡಲೆ ಆಕ್ಸಿಜನ್ ನೀಡುವ ಅಗತ್ಯವಿಲ್ಲ. ಹೊಟ್ಟೆಮೇಲೆ ದಿಂಬು ಇಟ್ಟುಕೊಂಡು ಬೋರಲು ಮಲಗುವುದರಿಂದ ನಮ್ಮ ಶ್ವಾಸಕೋಶಗಳು ವಿಸ್ತರಿಸಿಕೊಳ್ಳುತ್ತವೆ. ಇದರಿಂದ, ಕಫ ಇದ್ದರೆ ಅದು ಕ್ಲಿಯರ್ ಆಗುತ್ತದೆ. ಇದರಿಂದ, ಉಸಿರಾಟದ ಸಮಸ್ಯೆಯೂ ಸ್ವಲ್ಪ ಮಟ್ಟಿಗೆ ನಿವಾರಣೆಯಾಗುತ್ತದೆ ಎಂದು ಅವರು ಹೇಳಿದರು.

ರೆಮ್‍ಡಿಸಿವಿರ್ ಚುಚ್ಚುಮದ್ದು ರಾಮಬಾಣ ಅಲ್ಲ. ಸಾರ್ವಜನಿಕರು ರೆಮ್‍ಡಿಸಿವಿರ್ ಚುಚ್ಚುಮದ್ದಿಗೆ ಜೋತು ಬೀಳಬಾರದು. ಕೋವಿಡ್ ಕೇರ್ ಸೆಂಟರ್ ನಲ್ಲಿ ಐಸೋಲೇಷನ್ ಆಗಲು ಅವಕಾಶವಿದೆ. ಔಷಧಿ ಕೊಡುತ್ತಾರೆ. ತೊಂದರೆಗೆ ಒಳಗಾಗಬೇಡಿ. ವೈದ್ಯರಲ್ಲಿಯೂ ಮನವಿ ಮಾಡಿಕೊಳ್ಳುತ್ತೇನೆ. ಅಗತ್ಯವಿದ್ದಲ್ಲಿ ಮಾತ್ರ ರೆಮ್‍ಡಿಸಿವಿರ್ ಚುಚ್ಚು ಮದ್ದನ್ನು ಪಡೆಯಲು ತಿಳಿಸಬೇಕು. ಇಲ್ಲದಿದ್ದಲ್ಲಿ, ಸಾರ್ವಜನಿಕರಲ್ಲಿ ಮೂಡಿರುವ ಆತಂಕ ಕಡಿಮೆಯಾಗುವುದಿಲ್ಲ. ಈ ಚುಚ್ಚು ಮದ್ದು ಪಡೆಯಲು ಸಾರ್ವಜನಿಕರು ಪರದಾಡುತ್ತಿರುವುದನ್ನು ನಾವು ಪ್ರತಿನಿತ್ಯ ಕಾಣುತ್ತಿದ್ದೇವೆ ಎಂದು ರವಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News