ಬಳ್ಳಾರಿ ಮಹಾನಗರ ಪಾಲಿಕೆ ಸೇರಿ 10 ನಗರ ಸ್ಥಳೀಯ ಸಂಸ್ಥೆಗಳಿಗೆ ಮಂಗಳವಾರ ಮತದಾನ
ಬೆಂಗಳೂರು, ಎ. 26: ಬಳ್ಳಾರಿ ಮಹಾನಗರ ಪಾಲಿಕೆ ಸೇರಿದಂತೆ ಎಂಟು ಜಿಲ್ಲೆಗಳ 10 ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ನಾಳೆ(ಎ.27) ಮತದಾನ ನಡೆಯಲಿದ್ದು, ಸದರಿ ವೇಳಾಪಟ್ಟಿಯಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ರಾಜ್ಯ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಅವಧಿ ಮುಕ್ತಾಯವಾಗಿರುವ ಬಳ್ಳಾರಿ ಮಹಾನಗರ ಪಾಲಿಕೆಯ 39, ಬೆಂಗಳೂರು ಗ್ರಾಮಾಂತರ ಜಿಲ್ಲೆ ವಿಜಯಪುರ ಪುರಸಭೆ, ರಾಮನಗರ, ಚನ್ನಪಟ್ಟಣ ನಗರಸಭೆ, ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣ ಪಂಚಾಯತ್, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರಸಭೆ, ತೀರ್ಥಹಳ್ಳಿ ಪಟ್ಟಣ ಪಂಚಾಯತ್, ಹಾಸನದ ಬೇಲೂರು ಪುರಸಭೆ, ಮಡಿಕೇರಿ ನಗರಸಭೆ, ಬೀದರ್ ನಗರಸಭೆ, ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣ ಪಂಚಾಯತ್ ಹಾಗೂ ಬೀದರ್ ಜಿಲ್ಲೆಯ ಹಳ್ಳಿಖೇಡ ಪಟ್ಟಣ ಪಂಚಾಯತ್ ವಾರ್ಡ್‍ಗಳಿಗೆ ಚುನಾವಣೆ ನಡೆಸಲಿದೆ.
ಕೋವಿಡ್ ಮಾರ್ಗಸೂಚಿ ಆಧರಿಸಿ ಚುನಾವಣೆ ನಡೆಸಲು ಆಯೋಗ ಮತಗಟ್ಟೆಗಳಿಗೆ ಕೋವಿಡ್ ರಕ್ಷಣೆಗಾಗಿ ಸಾಮಗ್ರಿಗಳನ್ನು ಕಿಟ್ ರೂಪದಲ್ಲಿ ಒದಗಿಸಿದೆ. ಎಲ್ಲ ಚುನಾವಣಾಧಿಕಾರಿಗಳಿಗೆ, ಸಿಬ್ಬಂದಿ, ಪೊಲೀಸ್ ಮತ್ತು ಆರೋಗ್ಯ ಸಿಬ್ಬಂದಿಗೆ ಸೂಕ್ತ ಸೂಚನೆಗಳನ್ನು ನೀಡಲಾಗಿದೆ. ಬೆಳಗ್ಗೆ 7ಗಂಟೆಯಿಂದ ಸಂಜೆ 6ಗಂಟೆಯ ವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ. ಮತದಾನ ಮುಕ್ತಾಯಕ್ಕೆ ಒಂದು ಗಂಟೆ ಮುಂಚಿತವಾಗಿ ಕೋವಿಡ್ ಸೋಂಕಿತರು ಅಗತ್ಯ ಮುನ್ನೆಚ್ಚರಿಕೆಯೊಂದಿಗೆ ಮತಚಲಾಯಿಸಲು ಅವಕಾಶ ನೀಡಲಾಗಿದೆ ಎಂದು ಆಯೋಗ ತಿಳಿಸಿದೆ.