ಶಿಕ್ಷಕರ ವರ್ಗಾವಣೆಗೆ ಸುಗ್ರೀವಾಜ್ಞೆ ಹೊರಡಿಸಲು ಸಚಿವ ಸಂಪುಟ ಒಪ್ಪಿಗೆ

Update: 2021-04-26 16:49 GMT

ಬೆಂಗಳೂರು, ಎ. 26: `ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ(ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆ-2020'ಕ್ಕೆ ತಿದ್ದುಪಡಿ ತಂದು 2019-20ರಲ್ಲಿ ಕಡ್ಡಾಯ ಮತ್ತು ಹೆಚ್ಚುವರಿ ವರ್ಗಾವಣೆಗೆ ಒಳಗಾಗಿದ್ದ ಪ್ರಾಥಮಿಕ ಮತ್ತು ಫ್ರೌಢ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿನ ಶಿಕ್ಷಕರಿಗೆ ಕೌನ್ಸೆಲಿಂಗ್ ನಡೆಸಿ, ವರ್ಗಾವಣೆಯಲ್ಲಿ ಆದ್ಯತೆ ನೀಡಲು ಮೇಲ್ಕಂಡ ಕಾಯ್ದೆಗೆ ಸುಗ್ರೀವಾಜ್ಞೆ ಹೊರಡಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೇಲ್ಕಂಡ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ಸಚಿವ ಬಸವರಾಜ ಬೊಮ್ಮಾಯಿ, ರಾಜ್ಯಪಾಲರು ಸುಗ್ರೀವಾಜ್ಞೆಗೆ ಅಂಕಿತ ಹಾಕಿದ ಬಳಿಕ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಕಾನುನು ಕ್ರಮ: ಜಿಂದಾಲ್ ಕಂಪೆನಿಗೆ ಬಳ್ಳಾರಿಯಲ್ಲಿ ಜಿಲ್ಲೆಯ ತೋರಣಗಲ್‍ನಲ್ಲಿ ಗುತ್ತಿಗೆ ಆಧಾರದ ಮೇಲೆ ನೀಡಲಾಗಿದ್ದ 3,667 ಎಕರೆ ಭೂಮಿಯನ್ನು ಎಂಎಂಎಲ್ ವಶಕ್ಕೆ ತೆಗೆದುಕೊಳ್ಳಲು ಕಾನೂನು ಕ್ರಮ ಮುಂದುವರಿಸಲು ರಾಜ್ಯದ ಅಡ್ವಕೇಟ್ ಜನರಲ್ ಅವರಿಗೆ ಅನುಮೋದನೆ ನೀಡಲಾಗಿದೆ ಎಂದು ಬಸವರಾಜ ಬೊಮ್ಮಾಯಿ ವಿವರಿಸಿದರು.

ಪ್ರೋತ್ಸಾಹ: 2020-21ನೆ ಸಾಲಿನಲ್ಲಿ ಪ್ರಧಾನ ಮಂತ್ರಿಗಳ ಆತ್ಮನಿರ್ಭರ ಯೋಜನೆಯಡಿ ಆಹಾರ ಸಂಸ್ಕರಣಾ ಘಟಕಗಳಿಗೆ ಪ್ರೋತ್ಸಾಹ ನೀಡುವ 493 ಕೋಟಿ ರೂ.ಗಳ ವೆಚ್ಚದ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ಶೇ.60:40ರ ಅನುಪಾತದಲ್ಲಿ ನೆರವು ನೀಡಲು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಸಚಿವ ಬಸವರಾಜ ಬೊಮ್ಮಾಯಿ ಇದೇ ವೇಳೆ ತಿಳಿಸಿದರು.

ಮೀನುಗಾರಿಕೆ ಬಂದರಿಗೆ 22 ಕೋಟಿ ರೂ.: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮೀನುಗಾರಿಕೆ ಬಂದರಿನ ಮೂರನೆ ಹಂತದ ವಿಸ್ತರಣೆಯ ಕಾಮಗಾರಿಯನ್ನು 22 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಮಂಗಳೂರು ವಿವಿಯಲ್ಲಿ ಕ್ಯಾಂಪಸ್ ಕಟ್ಟಡಕ್ಕೆ 63 ಕೋಟಿ ರೂ. ಮಂಜೂರಾತಿ ನೀಡಲಾಗಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಸಂಪುಟ ಸಮ್ಮತಿ: ಎನ್‍ಜಿಇಎಫ್-ಜರ್ಮನಿ ಸಹಭಾಗಿತ್ವದ ಶೇರುಗಳನ್ನು ರಾಜ್ಯ ಸರಕಾರ ಖರೀದಿಸಿ, ಎನ್‍ಜಿಇಎಫ್‍ಗೆ ಸೇರಿದ 122 ಎಕರೆ ಭೂಮಿಯನ್ನು ಸರಕಾರದ ವಶಕ್ಕೆ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಬಾಗಲಕೋಟೆ ಜಿಲ್ಲೆಯ ಜೆ.ಕೆ.ಸಿಮೆಂಟ್ ಘಟಕಕ್ಕೆ ವ್ಯಾಟ್ ಸಾಲ ಉತ್ತೇಜನದ ಮಾನ್ಯತೆಯ ಅವಧಿಯನ್ನು 2019ರ ಆಗಸ್ಟ್ 24 ರಿಂದ ಎರಡು ವರ್ಷಗಳ ಅವಧಿಗೆ ವಿಸ್ತರಣೆಗೆ ಸಂಪುಟ ಸಮ್ಮತಿಸಿದೆ.

ಬೆಂಗಳೂರು ನಗರದ ವಾಹನ ದಟ್ಟಣೆ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ 477 ಕೋಟಿ ರೂ.ನೀಡಲು ಒಪ್ಪಿಗೆ, ಆನೇಕಲ್ ತಾಲೂಕಿನ ಸೂರ್ಯನಗರ ಸುತ್ತಮುತ್ತಲಿನ 52 ಜನವಸತಿಗಳಿಗೆ ಜಲ ಜೀವನ್ ಮಿಷನ್ ಯೋಜನೆಯಡಿ 74 ಕೋಟಿ ರೂ. ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಮಂಡ್ಯದ ಆದಿಚುಂಚನಗಿರಿ ಆಸ್ಪತ್ರೆ ವಿಸ್ತರಣೆಗೆ 22 ಎಕರೆ ಜಮೀನು ಮಂಜೂರು, ಅಥಣಿ ತಾಲೂಕಿನ ಸತ್ತಿ ಮತ್ತು ಇತರೆ 8 ಗ್ರಾಮಗಳಿಗೆ 45.39 ಕೋಟಿ ರೂ.ವೆಚ್ಚದಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆಗೆ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News