×
Ad

ಕೋವಿಡ್ ಲಸಿಕೆಗೆ 400 ಕೋಟಿ ರೂ., ರೆಮ್‍ಡೆಸಿವಿರ್ ಗೆ 28 ಕೋಟಿ ರೂ.ಮಂಜೂರು: ಸಚಿವ ಸುಧಾಕರ್

Update: 2021-04-26 23:13 IST

ಬೆಂಗಳೂರು, ಎ. 26: ಕೋವಿಡ್ ಸೋಂಕಿಗೊಳಗಾದವರೆಲ್ಲರೂ ಆಸ್ಪತ್ರೆಗೆ ದಾಖಲಾಗಬೇಕಿಲ್ಲ. ಕಡಿಮೆ ಲಕ್ಷಣ ಇರುವವರು ಮನೆಯಲ್ಲೇ ಆರೈಕೆ ಪಡೆಯಬಹುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆ ಆರೈಕೆಯಲ್ಲಿರುವವರಿಗೆ ಪ್ರತಿದಿನ ಕಾಲ್ ಸೆಂಟರ್ ನಿಂದ ಕರೆ ಮಾಡಿ ಮಾರ್ಗದರ್ಶನ ನೀಡಲಾಗುತ್ತದೆ. ಜೊತೆಗೆ ಔಷಧಿ ಕಿಟ್ ನೀಡಲಾಗುತ್ತದೆ. ಯು.ಕೆ.ಯಲ್ಲಿ ರೋಗಿಗಳನ್ನು ಮನೆಯಲ್ಲೇ ಇರಿಸಿ ಆಸ್ಪತ್ರೆ ಮೇಲೆ ಒತ್ತಡವಿಲ್ಲದಂತೆ ಮಾಡಿ ಸಾವಿನ ಪ್ರಮಾಣ ಕಡಿಮೆ ಮಾಡಲಾಗಿದೆ. ಇದೇ ರೀತಿ ರಾಜ್ಯದಲ್ಲೂ ಮಾಡಲಾಗುವುದು. ರಾಜ್ಯದಲ್ಲಿ 2 ಲಕ್ಷಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿದ್ದು, ಎಲ್ಲರಿಗೂ ಕರೆ ಮಾಡಲು ಸಿಬ್ಬಂದಿ ಬೇಕಾಗುತ್ತದೆ. ಇದಕ್ಕಾಗಿ ಸಿಐಐ ಸಹಯೋಗ ಪಡೆಯಲಾಗಿದೆ ಎಂದು ತಿಳಿಸಿದರು.

ಕೋವಿಡ್ ಸಂಬಂಧಿತ ಕೆಲ ಔಷಧಿಗಳಿಗೆ 81.32ಕೋಟಿ ರೂ., ಲಸಿಕೆಗೆ 400 ಕೋಟಿ ರೂ., ರೆಮ್‍ಡಿಸಿವಿರ್ ಗೆ 28 ಕೋಟಿ ರೂ.ಮಂಜೂರು ಮಾಡಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ದೊರೆತಿದೆ. ವಿಕ್ಟೋರಿಯಾ, ಬೌರಿಂಗ್‍ನಲ್ಲಿ 250 ಹಾಸಿಗೆಗಳಿಗೆ ವೆಂಟಿಲೇಟರ್ ಅಳವಡಿಸಲು ತೀರ್ಮಾನಿಸಲಾಗಿದೆ. ಬೆಂಗಳೂರಿನಲ್ಲಿ 3 ಸಾವಿರ ಹಾಸಿಗೆಯ ಮೇಕ್ ಶಿಫ್ಟ್ ಆಸ್ಪತ್ರೆ ಬರಲಿದೆ. ಪೋರ್ಟಬಲ್ ಆಕ್ಸಿಜನ್ ಪೂರೈಕೆ ಮಾಡಲಾಗುವುದು ಎಂದು ಅವರು ವಿವರ ನೀಡಿದರು.

ಖಾಸಗಿ ಆಸ್ಪತ್ರೆಗಳು ರಾಜ್ಯ ಸರಕಾರದ ಮನವಿಗೆ ಸ್ಪಂದಿಸಿವೆ. ಕೆಲ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಅವರ ಚಿಕಿತ್ಸೆ ಮುಗಿದ ಕೂಡಲೇ ಉಳಿದ ಹಾಸಿಗೆ ದೊರೆಯಲಿದೆ. ಯಾವುದೇ ಸರಳ ರೀತಿಯ ಚಿಕಿತ್ಸೆ ಯಾವುದೇ ವೈದ್ಯ ಪದ್ಧತಿಯಲ್ಲಿದ್ದರೂ ಅದನ್ನು ಉತ್ತೇಜಿಸಲಾಗುವುದು. ಆಯುಷ್‍ನಲ್ಲಿ ಔಷಧಿ, ಚಿಕಿತ್ಸೆ ಇದ್ದರೂ ಬೆಂಬಲಿಸಲಾಗುವುದು ಎಂದು ಸಚಿವ ಸುಧಾಕರ್ ಹೇಳಿದರು.

ಖಾಸಗಿ ಆಸ್ಪತ್ರೆಗಳೊಂದಿಗೆ ಸಭೆ: ಆರಂಭದಲ್ಲಿ ಖಾಸಗಿ ಆಸ್ಪತ್ರೆಗಳ ಪ್ರಮುಖರೊಂದಿಗೆ ಅವರು ಸಭೆ ನಡೆಸಿದರು. ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳು ಕಳೆದ ವರ್ಷಕ್ಕಿಂತ ಕಡಿಮೆ ಹಾಸಿಗೆಗಳನ್ನು ಮೀಸಲಿಟ್ಟಿವೆ. ಈಗ ಕೋವಿಡ್ ಪಾಸಿಟಿವ್ ಆದವರೆಲ್ಲ ಆಸ್ಪತ್ರೆಗೆ ಧಾವಿಸುತ್ತಿದ್ದಾರೆ. ಆದುದರಿಂದ ನಾನ್ ಕೋವಿಡ್ ಬಿಟ್ಟು ಕೋವಿಡ್‍ಗೆ ಒತ್ತು ನೀಡುವುದು ಅನಿವಾರ್ಯ ಎಂದು ಅವರು ತಿಳಿಸಿದರು.

ಖಾಸಗಿ ಆಸ್ಪತ್ರೆಗಳು ಶೇ.75ರಷ್ಟು ಹಾಸಿಗೆಗಳನ್ನು ಸರಕಾರಕ್ಕೆ ನೀಡಬೇಕು. ಈ ಪೂರ್ತಿ ಹಾಸಿಗೆಗಳು ಸರಕಾರಕ್ಕೆ ಸಲ್ಲಬೇಕು. ಸುವರ್ಣ ಆರೋಗ್ಯ ಸುರಕ್ಷ ಟ್ರಸ್ಟ್‍ನಿಂದ ಇದಕ್ಕೆ ಪಾವತಿ ಮಾಡಲಾಗುವುದು ಎಂದ ಅವರು, ಅಗತ್ಯ ಸೇವೆಗಳಿಗೆ ಯಾವುದೇ ಅಡ್ಡಿ ಮಾಡುವುದಿಲ್ಲ. ಆಸ್ಪತ್ರೆಗೆ ಹೋಗಲು, ಲಸಿಕೆ ಪಡೆಯಲು ಹೋಗುವವರಿಗೆ ಯಾರೂ ಅಡ್ಡಿ ಮಾಡುವುದಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ಕೋವಿಡ್ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರಕಾರ ನಾಳೆಯಿಂದ 14 ದಿನ ಕೊರೋನ ಕರ್ಫ್ಯೂ ಘೋಷಣೆ ಮಾಡಿದ್ದು, ಸಾರ್ವಜನಿಕರು ಕಡ್ಡಾಯ ಮನೆಯಲ್ಲೆ ಇದ್ದು, ಕೊರೋನ ಸೋಂಕಿನ ಚೈನ್ ಅನ್ನು ಮುರಿಯಬೇಕು. ಪಾಸಿಟಿವ್ ಆದ ಕೂಡಲೇ ಮನೆಯವರೊಂದಿಗೂ ಬೆರೆಯಬಾರದು. ಮೇ 1 ರಿಂದ 18 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಬಹುದು. ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಲಾಗುವುದು ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News