ಬೆಲೆ ಹೆಚ್ಚಳ ಖಂಡಿಸಿ ಸಂಸದ ಪ್ರತಾಪ್ ಸಿಂಹ ಕಚೇರಿ ಎದುರು ರೈತರ ಪ್ರತಿಭಟನೆ

Update: 2021-04-26 18:08 GMT

ಮೈಸೂರು,ಎ.26: ರಸಗೊಬ್ಬರ ಬೆಲೆ, ಡೀಸೆಲ್, ಪೆಟ್ರೋಲ್, ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಿಸಿರುವುದನ್ನು ವಿರೋಧಿಸಿ ಸೋಮವಾರ ಮೈಸೂರಿನ ಜಲದರ್ಶಿನಿ ಬಳಿ ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ, ಸರ್ಕಾರ 2022ಕ್ಕೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಹೇಳುತ್ತಲೇ ಕೃಷಿ ಉತ್ಪನ್ನಗಳ ವೆಚ್ಚವನ್ನು ಹೆಚ್ಚಿಸಿದೆ. ಗೊಬ್ಬರದ ಬೆಲೆ ಏರಿಕೆಯಿಂದಾಗಿ ಕೃಷಿಕರು ವ್ಯವಸಾಯವನ್ನೇ ತ್ಯಜಿಸಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗುವ ಆತಂಕ ರೈತ ಸಮುದಾಯದಲ್ಲಿದೆ. ವಿಶ್ವ ವಾಣಿಜ್ಯ ಒಪ್ಪಂದ ಜಾರಿಗೆ ಬಂದ ನಂತರವೂ ಬೇರೆ ದೇಶಗಳು ಕೃಷಿ ಮತ್ತು ಕೃಷಿ ಉಪಕಸುಬುಗಳಿಗೆ ಸಬ್ಸಿಡಿಯನ್ನು ಹೆಚ್ಚು ಹೆಚ್ಚು ನೀಡುತ್ತಲೇ ಬರುತ್ತಿವೆ. ಕೃಷಿಕನಿಗೆ ಎಲ್ಲಾ ರೀತಿಯ ಭದ್ರತೆಯನ್ನು ಒದಗಿಸುತ್ತಿದೆ ಎಂದು ತಿಳಿಸಿದರು.

ಬಹುಸಂಖ್ಯಾತರು ತೊಡಗಿರುವ ನಮ್ಮ ದೇಶದ ಕೃಷಿ ಕ್ಷೇತ್ರ ಮತ್ತು ಕೃಷಿಕರಿಗೆ ಭಾರತ ಸರ್ಕಾರ ನೀಡುತ್ತಾ ಬಂದಿರುವ ಉತ್ತೇಜನಗಳು ಪ್ರತಿವರ್ಷ ಕಡಿಮೆಯಾಗುತ್ತಲೇ ಬರುತ್ತಿವೆ. ಗೊಬ್ಬರದ ಸಬ್ಸಿಡಿಯನ್ನು ಕಡಿಮೆ ಮಾಡಿದ್ದರಿಂದಲೇ ಉತ್ಪಾದಕ ಕಂಪನಿಗಳು ಹೆಚ್ಚು ಹೆಚ್ಚು ಬೆಲೆಯನ್ನು ನಿಗದಿ ಮಾಡುತ್ತಿವೆ. ಇದು ಕೃಷಿಕರಿಗೆ ಹೊರಲಾರದಷ್ಟು ಹೊರೆಯಾಗಿದೆ. ಈ ಸಂಬಂಧ ಏರಿಸಿರುವ ಗೊಬ್ಬರದ ಬೆಲೆಯನ್ನು ಇಳಿಸಬೇಕು. ಕೃಷಿ ಮತ್ತು ಕೃಷಿಕರಿಗೆ ಮತ್ತಷ್ಟು ಉತ್ತೇಜನ ಕೊಡುವಂತಹ ಯೋಜನೆಗಳನ್ನು ರೂಪಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ತಾವು ಜಾರಿಗೆ ತರಲು ಹೊರಟಿರುವ ಮೂರು ಕೃಷಿ ಸಂಬಂಧಿತ ಮಸೂದೆಗಳನ್ನು ವಾಪಸ್ ಪಡೆಯಬೇಕು. ಅಲ್ಲದೆ ವಿದ್ಯುತ್ ಕ್ಷೇತ್ರವನ್ನು ಖಾಸಗಿಯವರಿಗೆ ವಹಿಸುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಡೀಸೆಲ್, ಪೆಟ್ರೋಲ್, ಗ್ಯಾಸ್ ಸಿಲೆಂಡರ್ ಬೆಲೆ ಹೆಚ್ಚಳದಿಂದ ರೈತ ಸಮುದಾಯವು ಸೇರಿದಂತೆ ಇತರೆ ಎಲ್ಲರಿಗೂ ಹೊರೆಯಾಗಿದೆ. ಅಗತ್ಯ ಸರಕುಗಳ ಬೆಲೆ ಇದರಿಂದಾಗಿ ಹೆಚ್ಚಿದೆ. ಈ ಕಾರಣ ಇವುಗಳ ಬೆಲೆಯನ್ನು ನಿಯಂತ್ರಣದಲ್ಲಿಡಬೇಕು ಎಂದು ವಿನಂತಿಸಿದರು.

ಪ್ರತಿಭಟನೆಯಲ್ಲಿ ಬೊಕ್ಕಳ್ಳಿ ನಂಜುಂಡಸ್ವಾಮಿ, ತಾಲೂಕಾಧ್ಯಕ್ಷ ಪಿ.ಮರಂಕಯ್ಯ, ತಾಲೂಕು ಸಂಘಟನಾ ಕಾರ್ಯದರ್ಶಿ ಮಂಡಕಳ್ಳಿ ಮಹೇಶ್, ನಾಗನಹಳ್ಳೀ ಚಂದ್ರು ಸೇರಿದಂತೆ ಕೆಲವರು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News