×
Ad

ತೀರಾ ಅವಶ್ಯಕತೆ ಇರುವವರು ಮಾತ್ರ ಆಕ್ಸಿಜನ್ ಬೆಡ್ ಪಡೆದುಕೊಳ್ಳಿ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮನವಿ

Update: 2021-04-26 23:43 IST

ಮೈಸೂರು,ಎ.26: ಮೈಸೂರಿನಲ್ಲಿ ಆಕ್ಸಿಜನ್ ಬೆಡ್‍ಗಳಿಗೆ ಕೊರತೆ ಇಲ್ಲ, ಆದರೆ ವೆಂಟಿಲೇಟರ್ ಕೊರತೆ ಇದೆ. ಕೊರೋನ ಸೋಂಕಿಗೆ ಒಳಗಾದವರೆಲ್ಲರೂ ಆಕ್ಸಿಜನ್ ಬೆಡ್‍ಗಳಿಗೆ ಬೇಡಿಕೆ ಇಡಬೇಡಿ. ತೀರಾ ಅಗತ್ಯ ಇರುವವರು ಮಾತ್ರ ಆಕ್ಸಿಜನ್ ಬೆಡ್ ಪಡೆದುಕೊಳ್ಳಿ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮನವಿ ಮಾಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಫೇಸ್ ಬುಕ್ ಲೈವ್‍ನಲ್ಲಿ ಮಾತನಾಡಿದ ಅವರು, ಎಪ್ರಿಲ್ ಎರಡನೇ ವಾರದ ನಂತರ ಮೈಸೂರಿನಲ್ಲಿ ಕೊರೋನ ಪ್ರಕರಣಗಳು ಹೆಚ್ಚಾಗುತ್ತಲಿದ್ದು, ದಿನವೊಂದಕ್ಕೆ ಸಾವಿರ ಸೋಂಕಿತರು ಪತ್ತೆಯಾಗುತ್ತಿದ್ದಾರೆ ಎಂದು ಹೇಳಿದರು.

ಮೈಸೂರಿನಲ್ಲಿ ಆಕ್ಸಿಜನ್ ಬೆಡ್ಗಳ ಕೊರತೆ ಇಲ್ಲ. ಆದರೆ ವೆಂಟಿಲೇಟರ್ ಕೊರತೆ ಇದೆ. ಈಗ ಸದ್ಯ 10 ವೆಂಟಿಲೇಟರ್ ಗಳು ಮಾತ್ರ ಖಾಲಿ ಇವೆ. ಕೊರೋನ ಸೋಂಕಿಗೆ ಒಳಗಾಗಿ ವೆಂಟಿಲೇಟರ್ ಗೆ ಹೋದವರು ಶೇ.5 ರಷ್ಟು ಮಂದಿ ಮಾತ್ರ ಬದುಕುತ್ತಿದ್ದಾರೆ. ಅನೇಕ ಮಂದಿ ಕೊರೋನ ಸೋಂಕು ದೃಢಪಟ್ಟ ಕೂಡಲೇ ಆಕ್ಸಿಜನ್ ಬೆಡ್‍ಗಳನ್ನು ಬ್ಲಾಕ್ ಮಾಡುತ್ತಿದ್ದಾರೆ. ಕೊರೋನ ಸೋಂಕಿಗೆ ಒಳಗಾದ ಶೇ.90 ರಷ್ಟು ಮಂದಿಗೆ ಆಕ್ಸಿಜನ್ ಬೆಡ್ ಅವಶ್ಯಕತೆ ಇರುವುದಿಲ್ಲ. ಯಾರಿಗೆ ಸ್ಯಾಚುರೇಷನ್ ಕಡಿಮೆಯಾಗುತ್ತದೊ ಅವರಿಗೆ ಮಾತ್ರ ಆಕ್ಸಿಜನ್ ಬೆಡ್ ಅವಶ್ಯಕತೆ ಇರುತ್ತಾರೆ. ತೀರಾ ಅವಶ್ಯಕತೆ ಇರುವವರು ಮಾತ್ರ ಆಕ್ಸಿಜನ್ ಬೆಡ್‍ಗಳನ್ನು ಪಡೆದುಕೊಳ್ಳಿ. ಹೋಂ ಐಸೂಲೇಷನ್‍ಗೆ ಒಳಗಾದವರು ಪ್ರತಿ ಎರಡು ಗಂಟೆಗೊಮ್ಮೆ ಸ್ಯಾಚುರೇಷನ್ ಪರೀಕ್ಷೆ ಮಾಡಿಕೊಳ್ಳಿ ಎಂದು ಹೇಳಿದರು.

ಮೈಸೂರು ಜಿಲ್ಲೆಯಲ್ಲಿ 145 ಸರ್ಕಾರಿ ಆಸ್ಪತ್ರೆಗಳಿದ್ದು, ಸುಮಾರು 7 ಸಾವಿರ ಆಕ್ಸಿಜನ್ ಬೆಡ್‍ಗಳು ಇವೆ. ಇನ್ನು ಹೆಚ್ಚುವರಿಯಾಗಿ 700 ಆಕ್ಸಿಜನ್ ಬೆಡ್‍ಗಳು ಸಿದ್ದಗೊಳ್ಳುತ್ತಿವೆ. ಮೈಸೂರು ಜಿಲ್ಲೆಯವರಿಗೆ ಈಗಿರುವ ಬೆಡ್‍ಗಳು ಸಾಕಾಗಿದೆ. ಆದರೆ ಬೆಂಗಳೂರು ಸೇರಿದಂತೆ ಸುತ್ತ ಮುತ್ತಲ ಜಿಲ್ಲೆಗಳಿಂದ ಮೈಸೂರಿಗೆ ಕೊರೋನ ಸೋಂಕಿತರು ಬರುತ್ತಿದ್ದಾರೆ. ಹಾಗಾಗಿ ನಮಗೆ ಒತ್ತಡ ಹೆಚ್ಚಾಗಿದೆ ಎಂದರು.

ಮೊದಲನೆ ಅಲೆಯಲ್ಲಿ ಆರ್‍ಟಿಪಿಸಿಆರ್ ಟೆಸ್ಟ್ ನಲ್ಲಿ ಲೋಪ ಆಗಿರಲಿಲ್ಲ, ಆದರೆ ಎರಡನೇ ಅಲೆಯಲ್ಲಿ ಲೋಪವಾಗಿದೆ. ಕೊರೋನ ಲಕ್ಷಣಗಳು ಇದ್ದವರು ಆರ್‍ಟಿಪಿಸಿಆರ್ ಪರೀಕ್ಷೆಗೆ ಒಳಪಟ್ಟ ಶೇ.20 ಜನರಿಗೆ ನೆಗೆಟಿವ್ ವರದಿಗಳು ಬರುತ್ತಿದೆ. ಎರಡನೇ ಅಲೆಯಲ್ಲಿ ಹೊಟ್ಟೆನೋವು, ಬಾಯಿ ರುಚಿ ತಪ್ಪುವುದು ಸೇರಿದಂತೆ ಅನೇಕ ಲಕ್ಷಣಗಳು ಕಂಡುಬರುತ್ತಿವೆ. ಹಾಗಗಿ ಆರ್‍ಟಿಪಿಎಸ್ ನಲ್ಲಿ ನೆಗೆಟಿವ್ ಬಂದೂ ಕೊರೋನ ಲಕ್ಷಣಗಳು ಇದ್ದವರು ವೈದ್ಯರನ್ನು ಸಂಪರ್ಕಿಸಿ ಐಸೂಲೇಷನ್‍ಗೆ ಒಳಪಡಬೇಕು ಎಂದು ಹೇಳಿದರು.

ಜನರಲ್ಲಿ ಆಕ್ಸಿಜನ್ ಬೆಡ್‍ಗಳು ಇಲ್ಲ, ರೆಮ್ಡಿಸಿವಿರ್ ಔಷಧ ಇಲ್ಲ ಎಂಬ ಆತಂಕ ಎದುರಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ರಮ್ಡಿಸಿವಿರ್ ಕೊರತೆ ಇಲ್ಲ. ಯಾರು ಸ್ಯಾನ್ ಪೋರ್ಟಲ್ ಮೂಲಕ ನೋಂದಣಿ ಮಾಡಿಸಿರುತ್ತಾರೊ ಅವರಿಗೆ ರೆಮ್ಡಿಸಿವಿರ್ ಔಷಧ ದೊರೆಯಲಿದೆ. ಸದ್ಯ ರೆಮ್ಡಿಸಿವಿರ್ ಕೊರತೆ ಕಂಡು ಬಂದರೂ ಮೇ ಒಳಗೆ ಸರಿಯಾಗಲಿದೆ ಎಂದು ಹೇಳಿದರು.

ದಯವಿಟ್ಟು ಎಲ್ಲರೂ ಕೊರೋನ ಲಸಿಕೆಯನ್ನು ಪಡೆಯುವ ಮೂಲಕ ಕೊರೋನ ತಡೆಗಟ್ಟಲು ಸಹಕರಿಸಬೇಕಾಗಿದೆ. ಈಗಾಗಲೇ ಮೈಸೂರು ಜಿಲ್ಲೆಯಲ್ಲಿ ಶೇ.57 ರಷ್ಟು ಕೋವಿಡ್ ಲಸಿಕೆ ಪಡೆದಿದ್ದಾರೆ. ಕೆಲವು ತಾಲೂಕುಗಳಲ್ಲಿ ಶೇ.75 ರಷ್ಟು ಲಸಿಕೆ ಪಡೆದಿದ್ದಾರೆ. ಮೈಸೂರು ನಗರದಲ್ಲಿ ಬರೀ ಶೇ.47 ರಷ್ಟು ಮಾತ್ರ ಲಸಿಕೆ ಪಡೆದಿದ್ದು, ದಯಮಾಡಿ ಎಲ್ಲರೂ ಕೋವಿಡ್ ಲಸಿಕೆ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಕೋವಿಡ್ ಲಸಿಕೆ ಪಡೆದ ಯಾರು ಸಹ ಕೊರೋನ ಸೋಂಕಿಗೆ ಸಾವೀಗೀಡಾಗಿರುವ ವರದಿಯಾಗಿಲ್ಲ. ಎರಡು ಡೋಸ್ ಲಸಿಕೆ ಪಡೆದವರಿಗೂ ಕೊರೋನ ಸೋಂಕಿ ಬಂದಿದೆಯಾದರೂ ಅವರ್ಯಾರು ಸಾವಿಗೀಡಾಗಿರುವ ವರದಿಯಾಗಿಲ್ಲ. ಹಾಗಾಗಿ ಎಲ್ಲರೂ ಕೋವಿಡ್ ಲಸಿಕೆ ಪಡೆದುಕೊಳ್ಳಿ. ಮೇ1ರ ನಂತರ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುವುದು. ಈಗಾಗಲೇ ರಾಜ್ಯ ಸರ್ಕಾರ ಬಿಗಿ ಕ್ರಮ ಕೈಗೊಂಡಿರುವುದರಿಂದ ಎಲ್ಲರೂ ಮನೆಯಲ್ಲೇ ಇದ್ದು ಕೊರೋನ ದೂರ ಮಾಡಲು ಸಹಕರಿಸಿ ಎಂದು ಹೇಳಿದರು.

ಮನೆಯಲ್ಲೇ ಐಸೂಲೇಷನ್‍ಗೆ ಒಳಗಾದವರಿಗೆ ಬೇಕಾದ ಔಷಧಗಳನ್ನು ಒದಗಿಸಲಾಗುವುದು. ಹೋಂ ಐಸೂಲೇಷನ್‍ನಲ್ಲಿ ಇರುವವರು ಪ್ರತಿ ಎರಡು ಗಂಟೆಗೊಮ್ಮೆ ಸ್ಯಾಚುರೇಷನ್ ಪರೀಕ್ಷೆ ಮಾಡಿಕೊಳ್ಳಿ. ಯಾರಲ್ಲಿ ಶೇ.94 ರಷ್ಟು ಸ್ಯಾಚುರೇಷನ್ ಕಡಿಮೆಯಾಗುತ್ತದೊ ಅವರು ಮಾತ್ರ ಆಕ್ಸಿಜನ್ ಬೆಡ್ ಪಡೆದುಕೊಳ್ಳಿ. ನಮ್ಮ ವಾರ್ ರೂಂ ನವರು ದಿನದ ಇಪ್ಪತ್ತನಾಲ್ಕು ಗಂಟೆಯೂ ಕೆಲಸ ಮಾಡುತ್ತಿದ್ದಾರೆ. ಕೊರೋನ ಸೋಂಕಿಗೆ ಒಳಗಾಗಿ ಮನೆಯಲ್ಲೇ ಐಸೂಲೇಷನ್‍ಗೆ ಒಳಗಾಗಿರುವವರು ತೊಂದರೆಯಾದರೆ ನಮ್ಮ ವಾರ್ ರೂಮ್ ದೂರವಾಣಿ 0821-2424111 ಗೆ ಕರೆ ಮಾಡಬಹುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News