×
Ad

ತಾಯಿಗೆ ಕೊರೋನ ಸೋಂಕು: ಮಗ ಆತ್ಮಹತ್ಯೆಗೆ ಶರಣು

Update: 2021-04-26 23:46 IST

ಹಾಸನ, ಎ.26: ತನ್ನ ತಾಯಿಗೆ ಕೊರೋನ ಸೋಂಕು ಬಂದಿದೆ ಎಂದು ನೊಂದುಕೊಂಡ ಪುತ್ರ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ನಗರದ ಜಿಲ್ಲಾ ಸರಕಾರಿ ಆಸ್ಪತ್ರೆ ಮಹಡಿ ಮೇಲೆ ನಡೆದಿದೆ.

ಕೊಡಗು ಜಿಲ್ಲೆ ಶನಿವಾರಸಂತೆ ಸಮೀಪದ ಮಾದರೆ ಗ್ರಾಮದ ಶರತ್ ಕುಮಾರ್ (31) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕಳೆದ ಹತ್ತು ದಿನಗಳ ಹಿಂದೆ ಶರತ್ ಕುಮಾರ್ ತಾಯಿಗೆ ಕೊರೋನ ಸೋಂಕು ತಗಲಿತ್ತು. ಅವರು ನಗರದ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯಲ್ಲಿ ಸಹೋದರರಿಬ್ಬರು ತಾಯಿಯ ಆರೈಕೆ ಮಾಡುತ್ತಿದ್ದರು.

ಮೃತ ಶರತ್ ಕಳೆದ ರಾತ್ರಿ ಸಹೋದರನಾದ ಶಶಿಕುಮಾರ್ ಗೆ ಕರೆ ಮಾಡಿ ಅಮ್ಮ ತುಂಬಾ ನೋವು ಅನುಭವಿಸುತ್ತಿದ್ದಾರೆ. ನನ್ನಿಂದ ಇದನ್ನು ನೋಡಲು ಸಾಧ್ಯವಿಲ್ಲ. ದಯಮಾಡಿ ಆಸ್ಪತ್ರೆಗೆ ಬಾ ಎಂದು ಕರೆದಿದ್ದನು. ಸಹೋದರ ಆಸ್ಪತ್ರೆಗೆ ಬಂದು ನೋಡಿದಾಗ ಅಲ್ಲಿ ಶರತ್ ಕಾಣಲಿಲ್ಲ. ಬಳಿಕ ಸೋಮವಾರ ಬೆಳಗ್ಗೆ ಆಸ್ಪತ್ರೆಯ ಏಳನೇ ಮಹಡಿಯ ಮೇಲೆ ನೀರಿನ ಟ್ಯಾಂಕ್ ನ ಪೈಪ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ವಿಷಯ ತಿಳಿದ ಹಾಸನ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News