×
Ad

ಮಾಜಿ ಸಂಸದ, ಕಾಂಗ್ರೆಸ್ ಹಿರಿಯ ನಾಯಕ ಎಸ್.ಬಿ. ಸಿದ್ನಾಳ ನಿಧನ

Update: 2021-04-27 13:03 IST
Image: Twitter

ಬೆಳಗಾವಿ, ಎ. 27: ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಹಿರಿಯ ರಾಜಕೀಯ ಮುತ್ಸದ್ದಿ, ಕಾಂಗ್ರೆಸ್ ಮುಖಂಡ, ಮಾಜಿ ಸಂಸದ ಎಸ್.ಬಿ.ಸಿದ್ನಾಳ್(85) ಅವರು ವಯೋಸಹಜ ಅನಾರೋಗ್ಯದಿಂದ ಮಂಗಳವಾರ ಬೆಳಗ್ಗೆ ಅಸುನೀಗಿದ್ದಾರೆ.

ಶ್ರೀಯುತರು ಪತ್ನಿ, ಇಬ್ಬರು ಪುತ್ರರು, ಪುತ್ರಿ, ಇಬ್ಬರು ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಸಹಿತ ಅಪಾರ ಸಂಖ್ಯೆಯ ಬಂಧು-ಮಿತ್ರರನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆಯು ಬೈಲಹೊಂಗಲ ತಾಲೂಕು ಸಾಣಿಕೊಪ್ಪದ ತೋಟದಲ್ಲಿ ಸಂಜೆ ನೆರವೇರಿಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಸಂಪಗಾಂವ ಗ್ರಾಮ ಮೂಲದ ಸಿದ್ನಾಳ್ ಅವರು ಇಲ್ಲಿನ ಮಹಾಂತೇಶ ನಗರದಲ್ಲಿ ವಾಸವಿದ್ದರು. ಸತತ 4 ಬಾರಿ 1980, 1984, 1989 ಹಾಗೂ 1991ರ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಆಯ್ಕೆಯಾಗಿ ಸಂಸದರಾಗಿದ್ದರು. ಕ್ಷೇತ್ರದಲ್ಲಿ ಮೊದಲ ಹ್ಯಾಟ್ರಿಕ್ ಗೆಲುವಿನ ದಾಖಲೆ ಮಾಡಿದ ಖ್ಯಾತಿಗೆ ಒಳಗಾಗಿದ್ದರು. ಕಾಂಗ್ರೆಸ್‍ನಲ್ಲಿ ಅತ್ಯಂತ ಪ್ರಭಾವಿ ನಾಯಕರಾಗಿದ್ದರು.

ಇತ್ತೀಚಿನ ವರ್ಷಗಳಲ್ಲಿ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದ ಅವರು, ಕಳೆದ ವರ್ಷ ಎಐಸಿಸಿ ಅಧ್ಯಕ್ಷರನ್ನು ಚುನಾವಣೆ ಮೂಲಕ ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದ್ದರು. ಅಲ್ಲದೆ, ದೇಶದಲ್ಲಿ ಬಲಿಷ್ಠ ವಿರೋಧ ಪಕ್ಷದ ಅಗತ್ಯವಿದೆ ಎಂದು ಹೇಳಿದ್ದರು. ಆಗ ಮಾತ್ರವೇ ಬಿಜೆಪಿ ವೈಫಲ್ಯಗಳನ್ನು ಎತ್ತಿ ತೋರಿಸಲು ಸಾಧ್ಯ ಎಂದಿದ್ದ ಸಿದ್ನಾಳ್, 'ಗಾಂಧಿ ಪರಿವಾರದ' ವಿರುದ್ಧವೂ ಟೀಕಿಸಿದ್ದರು.

ಶ್ರೀಯುತರ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಸಚಿವರು, ಶಾಸಕರು ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

ನಾಲ್ಕು ಬಾರಿ ಸಂಸದರಾಗಿದ್ದ ಸಿದ್ನಾಳ ಅವರು ಸರಳ ನಡೆ-ನುಡಿಯ, ದಕ್ಷ, ಪ್ರಾಮಾಣಿಕ ರಾಜಕಾರಣಿಯಾಗಿದ್ದರು. ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ. ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ

-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News