ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಕೊರತೆ ಆಗದಂತೆ ಕ್ರಮ, ಹಾಸಿಗೆ ಹೆಚ್ಚಳಕ್ಕೂ ಆದೇಶ : ಡಿಸಿಎಂ ಡಾ.ಅಶ್ವತ್ಥನಾರಾಯಣ

Update: 2021-04-27 09:09 GMT

ಕೋಲಾರ: ಇಲ್ಲಿನ ಎಸ್‌.ಎನ್‌.ಆರ್ ಜಿಲ್ಲಾ‌ ಆಸ್ಪತ್ರೆಯಲ್ಲಿ ಆಮ್ಲಜನಕದ ಸಮಸ್ಯೆ ಉಂಟಾಗಿ ಸೋಮವಾರ ರಾತ್ರಿ ನಾಲ್ವರು ಸಾವನ್ನಪ್ಪಿದ ಬೆನ್ನಲ್ಲೇ ಕೋಲಾರಕ್ಕೆ ಮಂಗಳವಾರ ಧಾವಿಸಿ ಬಂದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು, ಜಿಲ್ಲೆಯ ಇಡೀ ಕೋವಿಡ್‌ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿದರು.

ಕೋವಿಡ್‌ ಎರಡನೇ ಅಲೆಯಿಂದ ಜಿಲ್ಲೆಯೂ ಸಾಕಷ್ಟು ಸಮಸ್ಯೆಗೀಡಾಗಿದ್ದು ಆಮ್ಲಜನಕ, ರೆಮಿಡಿಸ್ವಿರ್‌, ಐಸಿಯು ಹಾಸಿಗೆಗಳು, ವೆಂಟಿಲೇಟರ್‌, ರಿಮೋಟ್‌ ಐಸಿಯು, ಕೋವಿಡ್‌ ಪರೀಕ್ಷೆ, ಫಲಿತಾಂಶ ಮತ್ತಿತರೆ ಸೌಲಭ್ಯಗಳ ಬಗ್ಗೆ ಅವರು ಪರಿಶೀಲನೆ ಮಾಡಿದರಲ್ಲದೆ, ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು. ಜತೆಗೆ, ಆಸ್ಪತ್ರೆ ಹಾಗೂ ಕೋವಿಡ್‌ ವಾರ್‌ ರೂಂನಲ್ಲಿರುವ ಕೊರತೆಗಳ ಬಗ್ಗೆಯೂ ಮಾಹಿತಿ ಪಡೆದುಕೊಂಡರು. ಜತೆಗೆ, ವಾರ್‌ ರೂಮ್ ಸಿಬ್ಬಂದಿ ಜತೆ ಸಮಾಲೋಚನೆಯನ್ನೂ ನಡೆಸಿದರು.

ಕೋಲಾರದಲ್ಲಿರುವ ಡಿಜಿಟಲ್ ಅರೋಗ್ಯ ವಾಹಿನಿಯಲ್ಲಿರುವ ಕೋವಿಡ್‌ ವಾರ್‌ ರೂಮಿಗೆ ಭೇಟಿ ನೀಡಿದರಲ್ಲದೆ, ಎರಡನೇ ಅಲೆ ತಡೆಗಟ್ಟುತ್ತಿರುವ ವಿಧಾನವನ್ನು ಪರಿಶೀಲಿಸಿದರು. ಮನೆಯಲ್ಲೇ ಕ್ವಾರಂಟೈನ್‌ ಆಗಿ ಚಿಕಿತ್ಸೆ ಪಡೆಯುತ್ತಿರವವರ ಬಗ್ಗೆ ಮಾಹಿತಿ ಪಡೆದರಲ್ಲದೆ, ಅವರಿಗೆ ನೀಡಲಾಗುತ್ತಿರುವ ಚಿಕಿತ್ಸೆ, ಅದನ್ನು ಮತ್ತಷ್ಟು ಉತ್ತಮಪಡಿಸುವ ಬಗ್ಗೆ ವೈದ್ಯರಿಗೆ  ಉಪ ಮುಖ್ಯಮಂತ್ರಿ ಸಲಹೆ ನೀಡಿದರು.

ಮಾಹಿತಿ ಕೊರತೆ, ಡಿಸಿಎಂ ಕಿಡಿ 

ಕೋವಿಡ್‌ ಎರಡೂ ಅಲೆಗಳ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದವರ ಬಗ್ಗೆ ಸಮರ್ಪಕ ಮಾಹಿತಿ ಇಲ್ಲದ ಕಾರಣಕ್ಕೆ ಡಾ.ಆಶ್ವತ್ಥನಾರಾಯಣ, ವೈದ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. 

ಮೊದಲ ಅಲೆ ಬಂದಾಗಿನಿಂದ ಏನು ಮಾಡುತ್ತಿದ್ದೀರಿ? ಎಷ್ಟು ಸೋಂಕಿತರು ಬಂದರು? ಎಷ್ಟು ಜನ ದಾಖಲಾದರು? ಎಷ್ಟು ಜನ ಚಿಕಿತ್ಸೆ ಪಡೆದರು? ಇತ್ಯಾದಿ ಮಾಹಿತಿ ಇಲ್ಲದಿದ್ದರೆ ಹೇಗೆ? ಸರಿಯಾಗಿ ಮಾಹಿತಿಯೇ ಇಲ್ಲದಿದ್ದರೆ ನೀವು ಉತ್ತಮ ಸೌಲಭ್ಯ ನೀಡಲು ಪೂರ್ವ ಸಿದ್ಧತೆ ಮಾಡಿಕೊಳ್ಳಲು ಹೇಗೆ ಸಾಧ್ಯ? ಎಂದು ತರಾಟೆಗೆ ತೆಗೆದುಕೊಂಡರು. 

ಕೋಲಾರ ಲೋಕಸಭೆ ಸದಸ್ಯ ಮುನಿಸ್ವಾಮಿ, ವಿಧಾನ ಪರಿಷತ್‌ ಸದಸ್ಯ ವೈ.ಎ.ನಾರಾಯಣ ಸ್ವಾಮಿ, ಶಾಸಕ ಶ್ರೀನಿವಾಸ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ವೇಣುಗೋಪಾಲ್‌ ಅವರು ಡಿಸಿಎಂ ಜತೆಯಲ್ಲಿದ್ದರು. ಶಾಸಕಿ ರೂಪಾ ಶಶಿದರ, ನಂಜೇಗೌಡ ಅವರು ವರ್ಚುವಲ್ ಮೂಲಕ ಡಿಸಿಎಂ ಸಭೆಯಲ್ಲಿ ಭಾಗವಹಿಸಿದ್ದರು. ಜಿಲ್ಲಾಧಿಕಾರಿ, ಎಸ್ಪಿ ಸೇರಿದಂತೆ ಇತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News