ವದಂತಿಗಳಿಗೆ ಕಿವಿಗೊಡಬೇಡಿ, ಎಲ್ಲ ಮುಸ್ಲಿಮರೂ ಕೋವಿಡ್‌ ಲಸಿಕೆ ಪಡೆದುಕೊಳ್ಳಿ: ಮೌಲಾನಾ ಸೈಯದ್ ತನ್ವೀರ್ ಹಾಶ್ಮಿ ಕರೆ

Update: 2021-04-27 09:48 GMT

ಬಿಜಾಪುರ: ಕೆಲವು ಮುಸ್ಲಿಮರು ಕೋವಿಡ್‌ ವ್ಯಾಕ್ಸಿನ್‌ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ ಎಂಬುವುದರ ಕುರಿತಾದಂತೆ ಮಾತನಾಡಿದ ಅಹ್ಲೆ ಸುನ್ನತ್‌ ಜಮಾತ್‌ ಅಧ್ಯಕ್ಷ ಹಾಗೂ ಮುಸ್ಲಿಂ ವಿದ್ವಾಂಸ ಸೈಯದ್‌ ತನ್ವೀರ್‌ ಹಾಶ್ಮಿ, "ಎಲ್ಲರೂ ಕೋವಿಡ್‌ ವ್ಯಾಕ್ಸಿನ್‌ ಹಾಕಿಸಿಕೊಳ್ಳಿ ಮತ್ತು ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ" ಎಂದು ಕರೆ ನೀಡಿದ್ದಾರೆ. 

"ಕೆಲವು ವ್ಯಕ್ತಿಗಳು ಕೋವಿಡ್‌ ಲಸಿಕೆಯ ಕುರಿತಾದಂತೆ ವದಂತಿಗಳನ್ನು ಹಬ್ಬುತ್ತಿದ್ದಾರೆ. ಈ ವದಂತಿಗಳಿಗೆ ಹಲವು ಮುಸಿಮರು ಬಲಿ ಬೀಳುತ್ತಿದ್ದಾರೆ" ಎಂದು ಅವರು ಹೇಳಿದರು.

"ವಿಜ್ಞಾನಿಗಳು ಮುಸ್ಲಿಮರಿಗೆ ಬೇರೆ, ಮುಸ್ಲಿಮೇತರರಿಗೆ ಬೇರೆ ಎಂಬಂತೆ ಲಸಿಕೆಗಳನ್ನು ತಯಾರಿಸಲಿಲ್ಲ. ಮುಸ್ಲಿಮರು ಲಸಿಕೆ ಹಾಕಿಸಿಕೊಳ್ಳದೆ ಇರಲಿ ಎಂಬ ಕಾರಣದಿಂದ ಯಾರೋ ಕಿಡಿಗೇಡಿಗಳು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ನಮ್ಮದೇ ಸಮುದಾಯದ ಹಲವು ಮಂದಿ ಈ ಕುರಿತಾದಂತೆ ವದಂತಿಗಳನ್ನು ಹಬ್ಬಿಸಿ ಜನರನ್ನು ಭಯಭೀತರನ್ನಾಗಿಸುತ್ತಿದ್ದಾರೆ" ಎಂದು ಅವರು ಹೇಳಿದರು.

"ತಜ್ಞರ ಪ್ರಕಾರ, ಯಾರೆಲ್ಲಾ ಕೋವಿಡ್‌ ಲಸಿಕೆ ಪಡೆದುಕೊಂಡಿದ್ದಾರೆಯೋ, ಅವರಲ್ಲಿ ಬಹುತೇಕರಿಗೆ ಕೋವಿಡ್‌ ಸೋಂಕು ಉಂಟಾಗಿಲ್ಲ. ಒಂದು ವೇಳೆ ಲಸಿಕೆ ಪಡೆದ ಬಳಿಕವೂ ಸೋಂಕು ಕಂಡು ಬಂದರೆ ಅದು ತೀವ್ರ ಪ್ರಮಾಣದಲ್ಲಿರುವುದಿಲ್ಲ ಮತ್ತು ಆಸ್ಪತ್ರೆಗೆ ದಾಖಲಾಗುವಂತಹ ಪರಿಸ್ಥಿತಿ ಎದುರಾಗುವುದಿಲ್ಲ. ಲಸಿಕೆ ಪಡೆದುಕೊಳ್ಳುವುದು ಸದ್ಯದ ಪರಿಸ್ಥಿತಿಯಲ್ಲಿ ಜೀವ ಉಳಿಸುವುದಕ್ಕಿರುವ ಮಾರ್ಗ" ಎಂದು ವೈದ್ಯರು ಹೇಳಿಕೆ ನೀಡಿದ್ದಾಗಿ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News