ಜನರಿಗೆ ಕಷ್ಟಕಾಲದಲ್ಲಿ ನೆರವಾಗಬೇಕು: ಪಕ್ಷದ ಶಾಸಕರಿಗೆ ಸಿದ್ದರಾಮಯ್ಯ ಮನವಿ

Update: 2021-04-27 11:40 GMT

ಬೆಂಗಳೂರು, ಎ. 27: `ನಮ್ಮ ಪಕ್ಷದ ಎಲ್ಲ ಶಾಸಕರು ಸೋಂಕಿತರ ಚಿಕಿತ್ಸೆಗೆ ಅಗತ್ಯವಾದ ಆಸ್ಪತ್ರೆ, ಆಕ್ಸಿಜನ್, ಔಷಧಿ, ಆ್ಯಂಬುಲೆನ್ಸ್ ದೊರೆಯಲು ನೆರವು ನೀಡಬೇಕು ಹಾಗೂ ಹಸಿವಿನಿಂದ ಬಳಲುತ್ತಿರುವವರಿಗೆ ಅನ್ನ ಆಹಾರದ ವ್ಯವಸ್ಥೆಯನ್ನು ಕಳೆದ ವರ್ಷದಂತೆ ಈ ವರ್ಷವೂ ಮಾಡುವ ಮೂಲಕ ಜನರ ಕಷ್ಟಕಾಲದಲ್ಲಿ ನೆರವಾಗಬೇಕು' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಅವರು, `ಕೋವಿಡ್ ಎರಡನೆ ಅಲೆ ರಾಜ್ಯ ಮತ್ತು ರಾಷ್ಟ್ರವನ್ನು ಬಾಧಿಸುತ್ತಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಜನತೆ ಮುನ್ನೆಚ್ಚರಿಕೆ ವಹಿಸುವುದು ತೀರಾ ಅಗತ್ಯ. ಎಲ್ಲ ಮಾಸ್ಕ್ ಧರಿಸುವ, ಸುರಕ್ಷಿತ ಅಂತರ ಕಾಪಾಡುವ ಮೂಲಕ ಕೋವಿಡ್ ಸೋಂಕಿನಿಂದ ದೂರ ಇರಬೇಕು' ಎಂದು ಕೋರಿದ್ದಾರೆ.

'ಬೆಳಗಾವಿ ಜಿಲ್ಲೆಯ ಚಿಕ್ಕೋಡಿ-ಸದಲಗಾ ವಿಧಾನಸಭೆ ಕ್ಷೇತ್ರದ ಅಂಕಲಿಯಲ್ಲಿ ನೂತನವಾಗಿ ನಿರ್ಮಿಸಿರುವ ಸುಸಜ್ಜಿತ ಕೋವಿಡ್ ಆಸ್ಪತ್ರೆಯ ಉದ್ಘಾಟನೆಯನ್ನು ಆನ್‍ಲೈನ್ ಮೂಲಕ ನೆರವೇರಿಸಿದೆ ಎಂದು ತಿಳಿಸಿದ್ದಾರೆ.

'ಬೆಳಗಾವಿ ಜಿಲ್ಲೆಯಲ್ಲಿ ಎರಡನೇ ದೊಡ್ಡ ಖಾಸಗಿ ಕೋವಿಡ್ ಆಸ್ಪತ್ರೆ ಇದಾಗಿದ್ದು, ಸುಮಾರು 120 ಬೇಡ್‍ಗಳ ಸೌಲಭ್ಯ ಹೊಂದಿದೆ. ಸೋಂಕಿತರಿಗೆ ಚಿಕಿತ್ಸೆ ನೀಡುವುದರ ಜೊತೆಗೆ ಉಪಾಹಾರ, ಊಟ, ಹಣ್ಣುಗಳನ್ನು ಶಾಸಕರಾದ ಗಣೇಶ್ ಹುಕ್ಕೇರಿ ಹಾಗೂ ಮಾಜಿ ಸಚಿವರಾದ ಪ್ರಕಾಶ್ ಹುಕ್ಕೇರಿ ನೇತೃತ್ವದಲ್ಲಿ ಉಚಿತವಾಗಿ ನೀಡುತ್ತಿರುವುದು ಶ್ಲಾಘನೀಯ' ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News