ಬಳ್ಳಾರಿ ಮಹಾನಗರ ಪಾಲಿಕೆ ಸಹಿತ 10 ನಗರ ಸ್ಥಳೀಯ ಸಂಸ್ಥೆಗಳ ಮತದಾನ ಶಾಂತಿಯುತ

Update: 2021-04-27 11:42 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ. 27: ಬಳ್ಳಾರಿ ಮಹಾ ನಗರ ಪಾಲಿಕೆ ಸೇರಿದಂತೆ ಎಂಟು ಜಿಲ್ಲೆಗಳ ಹತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಇಂದು ಬೆಳಗ್ಗೆಯಿಂದ ನಡೆದ ಮತದಾನ ಕೆಲ ಸಣ್ಣಪುಟ್ಟ ಗೊಂದಲಗಳನ್ನು ಹೊರತುಪಡಿಸಿದರೆ ಶಾಂತಿಯುತ ಅಂತ್ಯ ಕಂಡಿದೆ.

ಕೊರೋನ ವೈರಸ್ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರಕಾರ ರಾತ್ರಿ 9ಗಂಟೆಯಿಂದ `ಕೊರೋನ ಕರ್ಫ್ಯೂ' ಜಾರಿಗೆ ಬರಲಿದೆ. ಈ ಮಧ್ಯೆ ಬೆಳಗ್ಗೆ 7ಗಂಟೆಯಿಂದ ಸಂಜೆ 6ಗಂಟೆಯ ವರೆಗೆ ಮತದಾನ ನಡೆದಿದ್ದು, ರಾಜಕೀಯ ಪಕ್ಷಗಳು ಸೇರಿದಂತೆ ಪ್ರಮುಖ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಿದ್ದು, ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ.

ಅವಧಿ ಮುಕ್ತಾಯವಾಗಿರುವ ಬಳ್ಳಾರಿ ಮಹಾ ನಗರ ಪಾಲಿಕೆಯ, ಬೆಂ.ಗ್ರಾಮಾಂತರ ಜಿಲ್ಲೆ ವಿಜಯಪುರ ಪುರಸಭೆ, ಚನ್ನಪಟ್ಟಣ ನಗರಸಭೆ, ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣ ಪಂಚಾಯತ್, ಭದ್ರಾವತಿ ನಗರಸಭೆ, ತೀರ್ಥಹಳ್ಳಿ ಪಟ್ಟಣ ಪಂಚಾಯತ್, ಬೇಲೂರು ಪುರಸಭೆ, ಮಡಿಕೇರಿ ನಗರಸಭೆ, ಬೀದರ್ ನಗರಸಭೆ, ಹಿರೇಕೆರೂರು ಪಟ್ಟಣ ಪಂಚಾಯತ್ ಹಾಗೂ ಬೀದರ್ ಜಿಲ್ಲೆಯ ಹಳ್ಳಿಖೇಡ ಪಟ್ಟಣ ಪಂಚಾಯತ್ ವಾರ್ಡ್‍ಗಳಿಗೆ ಚುನಾವಣೆ ನಡೆದಿದೆ. ಕೋವಿಡ್ ಮಾರ್ಗಸೂಚಿ ಅನುಸರಿಸಿ ಚುನಾವಣೆ ನಡೆಸಲಾಗಿದೆ.

ಅಭಿವೃದ್ಧಿಗೆ ಮತ: ಬಳ್ಳಾರಿ ಮಹಾನಗರ ಪಾಲಿಕೆಯ ಚುನಾವಣೆ ಅಭಿವೃದ್ಧಿ ಪರ ಮತ ಹಾಕುವ ಚುನಾವಣೆ. ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ 27ಕ್ಕೂ ಹೆಚ್ಚು ಸ್ಥಾನಗಳು ದೊರೆಯಲಿದ್ದು, ಬಿಜೆಪಿ ಅಧಿಕಾರಿ ಹಿಡಿಯುವುದು ನಿಶ್ಚಿತ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಕುಟುಂಬ ಸಮೇತರಾಗಿ ಮತಚಲಾಯಿಸಿದ ಬಳಿಕ ಮಾಧ್ಯಮಗಳ ಮುಂದೆ ಭರವಸೆ ವ್ಯಕ್ತಪಡಿಸಿದರು.

ವಿಪಕ್ಷದವರಿಗೆ ಟೀಕೆ ಮಾಡಲು ವಿಷಯಗಳೇ ಇಲ್ಲ. ಹೀಗಾಗಿ ಅನಾವಶ್ಯಕ ಆರೋಪ ಮಾಡುತ್ತಿದ್ದಾರೆ. ಕೊರೋನ ಸಂಕಷ್ಟದ ಈ ವೇಳೆ ಸರಕಾರ ದಿಟ್ಟ ಹೆಜ್ಜೆ ಇಡುತ್ತಿದೆ. ಪ್ರತಿಯೊಬ್ಬರು ಇದಕ್ಕೆ ಸಹಕಾರ ನೀಡಬೇಕಿದೆ. ಜನತಾ ಕರ್ಫೂ ಜನರ ಕಟ್ಟು ನಿಟ್ಟಾಗಿ ಪಾಲನೆ ಮಾಡಿ ಕೊರೋನ ಸೋಂಕಿನ ವಿರುದ್ಧದ ಹೋರಾಟಕ್ಕೆ ಸರಕಾರದೊಂದಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಕೋರಿದರು.

ಮಹಾನಗರ ಪಾಲಿಕೆ ಚುನಾವಣೆ ಪ್ರಚಾರದ ವೇಳೆ ಕೊರೋನ ನಿಯಮ ಉಲ್ಲಂಘನೆ ಮಾಡಿದ ಆರೋಪ ನನ್ನ ಮೇಲೆಯೂ ಇದೆ. ಜನರು ಸೋಂಕಿನ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಬಳ್ಳಾರಿ ಉಸ್ತುವಾರಿ ವಹಿಸುವ ಬಗ್ಗೆ ಚರ್ಚಿಸುವ ಸಂದರ್ಭ ಇದಲ್ಲ. ಕೊರೋನ ಕರ್ಫ್ಯೂಗೆ ಜನರು ಬೆಂಬಲ ನೀಡಬೇಕು. ಅಲ್ಲದೆ, ಸೋಂಕಿನ ಸಂಪರ್ಕ ಕೊಂಡಿ ಮುರಿಯಬೇಕು ಎಂದು ರಾಮುಲು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News