ರೆಮ್‍ಡೆಸಿವಿರ್ ಪಡೆದರೆ ಕೊರೋನದಿಂದ ಸಾಯಲ್ಲ ಎಂಬ ಭ್ರಮೆಯಿಂದ ಹೊರ ಬನ್ನಿ: ಸಚಿವ ಈಶ್ವರಪ್ಪ

Update: 2021-04-27 12:18 GMT

ಶಿವಮೊಗ್ಗ, ಏ.27: ರೆಮ್‍ಡೆಸಿವಿರ್ ಲಸಿಕೆ ಪಡೆದುಕೊಂಡರೆ ಕೊರೋನದಿಂದ ಸಾಯುವುದಿಲ್ಲ ಎಂಬ ಭ್ರಮೆಯಿಂದ ಜನರು ಹೊರಗೆ ಬರಬೇಕಾಗಿದೆ. ಇದನ್ನು ಎಲ್ಲರಿಗೂ ನೀಡುವುದಿಲ್ಲ ಹಾಗೂ ಪಡೆದವರೆಲ್ಲ ಬದುಕುತ್ತಾರೆ ಎಂದೇನಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ನೂತನ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಮಂಗಳವಾರ ನಡೆದ ಹಿರಿಯ ಅಧಿಕಾರಿಗಳ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಕೊರೋನ ಪಾಸಿಟಿವ್ ವ್ಯಕ್ತಿಗಳಿಗೆ ರೆಮ್‍ಡೆಸಿವಿರ್ ನೀಡಿದರೆ ಸಂಪೂರ್ಣವಾಗಿ ಗುಣಮುಖರಾಗುತ್ತಾರೆ ಎಂಬುವುದಕ್ಕೆ ಆಧಾರವಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಜಿಲ್ಲೆಯ ರೋಗಿಗಳ ಅಂಕಿ ಅಂಶಗಳನ್ನು ನೋಡಿದರೂ ಇದು ಸ್ಪಷ್ಟವಾಗುತ್ತದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಇದುವರೆಗೆ ಗುಣಮುಖರಾಗಿರುವ ಶೇ.80ರಷ್ಟು ಮಂದಿಗೆ ಈ ಇಂಜೆಕ್ಷನ್ ನೀಡಲಾಗಿರಲಿಲ್ಲ ಎಂಬುವುದನ್ನು ಗಮನಿಸಬೇಕಾಗಿದೆ. ಅದೇ ರೀತಿ ಕೊರೋನದಿಂದ ಸಾವಿಗೀಡಾದ ಎಲ್ಲ 15 ಮಂದಿಗೂ ಸದರಿ ಇಂಜೆಕ್ಷನ್ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ತಜ್ಞ ವೈದ್ಯರ ಸಲಹೆ ಅನುಸರಿಸಬೇಕು ಎಂದು ಮನವಿ ಮಾಡಿದರು.

ಒಂದು ವೇಳೆ, ಇಂಜೆಕ್ಷನ್ ಬೇಕೇ ಬೇಕು ಎಂದಾದರೆ ಅನಿವಾರ್ಯವಾಗಿ ಕೊಡಬೇಕಾಗುತ್ತದೆ. ಆದರೆ, ಜನರು ಇಂಜೆಕ್ಷನ್ ತೆಗೆದುಕೊಂಡ ಬಳಿಕ ಗುಣಮುಖರಾಗುತ್ತೇವೆ ಎಂದು ಭ್ರಮೆಯಿಂದ ಹೊರಗಡೆ ಬರಬೇಕು ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯತ್ ಸಿಇಒ ಎಂ.ಎಲ್.ವೈಶಾಲಿ, ಎಸ್.ಪಿ.ಲಕ್ಷ್ಮೀಕಾಂತ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News