×
Ad

ಕೊರೊನ ಕರ್ಫ್ಯೂ ಬಡವರು, ಕೂಲಿ ಕಾರ್ಮಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ: ಸರಕಾರಕ್ಕೆ ಎಸ್‍ಡಿಪಿಐ ಮನವಿ

Update: 2021-04-27 17:54 IST

ಬೆಂಗಳೂರು, ಎ.27: ರಾಜ್ಯ ಸರಕಾರ ಎರಡು ವಾರಗಳ ಕೊರೋನ ಕರ್ಫ್ಯೂ ಘೋಷಿಸಿದೆ. ಇದರಿಂದ ಬಡವರು, ಸ್ಲಮ್ ವಾಸಿಗಳು, ಕೂಲಿ ಕಾರ್ಮಿಕರು, ಭಿಕ್ಷುಕರು, ವಲಸೆ ಕಾರ್ಮಿಕರು, ಬೀದಿ ವ್ಯಾಪಾರಿಗಳು ಮತ್ತು ಅನ್ಯ ರಾಜ್ಯದವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸರಕಾರ ವಿಶೇಷ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್.ಡಿ.ಪಿ.ಐ) ಪಕ್ಷದ ರಾಜ್ಯಾಧ್ಯಕ್ಷ  ಅಬ್ದುಲ್ ಹನ್ನಾನ್ ಆಗ್ರಹಿಸಿದ್ದಾರೆ.

ಸಾಂಕ್ರಾಮಿಕ ರೋಗ ತಡೆಗೆ ಕರ್ಫ್ಯೂ ಅಗತ್ಯವೆಂದು ತಜ್ಞರು ಸಲಹೆ ಕೊಟ್ಟಿದ್ದಾರೆ. ಸರಕಾರದ ಮಂತ್ರಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾಂಕ್ರಾಮಿಕ ವಿರೂಪ ಹಂತಕ್ಕೆ ತಲುಪಿದೆ ಎಂದು ಬಿಜೆಪಿ ನಾಯಕರು ಒಪ್ಪಿಕೊಂಡಿದ್ದಾರೆ. ಇಂತಹ ಬೇಜವಾಬ್ದಾರಿ ಕಾರ್ಯ ಸರಕಾರಗಳಿಂದ ಎಂದಿಗೂ ನಡೆಯಬಾರದು ಎಂದು ಅವರು ಹೇಳಿದ್ದಾರೆ.

ಪಕ್ಷ, ಪಂಗಡ, ಜಾತಿ, ಧರ್ಮ ಬೇಧ ಮರೆತು ಎಲ್ಲರೂ ಒಂದಾಗಿ ಕೊರೋನ ವಿರುದ್ಧ ಹೋರಾಡಬೇಕಿದೆ. ವಿಶೇಷವಾಗಿ ಅನ್ಯ ರಾಜ್ಯ, ಜಿಲ್ಲೆಗಳಿಂದ ನಗರಗಳಿಗೆ ಲಕ್ಷಾಂತರ ವಲಸೆ ಕಾರ್ಮಿಕರು ಬಂದಿದ್ದಾರೆ. ಅವರಲ್ಲಿ ಕೆಲವರು ವಾಪಾಸು ಹೋಗುವ ತರಾತುರಿಯಲ್ಲಿದ್ದಾರೆ. ಅವರನ್ನು ಮನವೊಲಿಸಿ ಅವರಿಗೆ ಸೂಕ್ತ ವೈದ್ಯಕೀಯ ನೆರವು, ಆಹಾರ, ತಾತ್ಕಾಲಿಕ ವಸತಿ ವ್ಯವಸ್ಥೆ ಸರಕಾರ ಒದಗಿಸಬೇಕು ಎಂದು ಅಬ್ದುಲ್ ಹನ್ನಾನ್ ಒತ್ತಾಯಿಸಿದ್ದಾರೆ.

ಕಳೆದ ವರ್ಷ ರೈಲು, ಬಸ್ಸು, ವಾಹನ ಬಂದ್ ಆದ ಕಾರಣ ಲಕ್ಷಾಂತರ ವಲಸೆ ಕಾರ್ಮಿಕರು, ಮಹಿಳೆಯರು, ಮಕ್ಕಳು ನಡೆದುಕೊಂಡು ತಾಯ್ನಾಡಿಗೆ ಸಂಚರಿಸಿ ಹಲವೆಡೆ ಅನಾಹುತವಾಗಿತ್ತು. ಜೀವ ಹಾನಿಯೂ ಆಗಿತ್ತು. ಈ ಬಗ್ಗೆ ಸರಕಾರ ಸೂಕ್ತ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸಾರ್ವಜನಿಕರು, ಪೊಲಿಸರು, ವೈದ್ಯಕೀಯ ಸಿಬ್ಬಂದಿಗಳು ಮತ್ತು ಆಸ್ಪತ್ರೆಗಳ ಉತ್ತಮ ರೀತಿಯ ಸಹಕಾರ ಸಂವಹನ ನಡೆಯಬೇಕು.  ಯಾರಿಗೂ ತೊಂದರೆಯಾಗದಂತೆ ವರ್ತಿಸಬೇಕು. ಕಡು ಬಡವರಿಗೆ ದೈನಂದಿನ ಆಹಾರ ಸಿಗುವಂತೆ ನೋಡ ಬೇಕಾಗಿದೆ. ಸಣ್ಣ ಮಕ್ಕಳಿಗೆ ಹಾಲು ಮತ್ತಿತರ ವ್ಯವಸ್ಥೆಯಲ್ಲಿ ಕೊರತೆ ಯಾಗದಂತೆ ಸಮರೊಪಾದಿಯಲ್ಲಿ ಸರಕಾರ ಮತ್ತು ಸಮಾಜ ಸೇವಾ ಸಂಸ್ಥೆಗಳು ಕೆಲಸ ಮಾಡಬೇಕು ಎಂದು ಅಬ್ದುಲ್ ಹನ್ನಾನ್ ಕರೆ ನೀಡಿದ್ದಾರೆ.

ಎಸ್ಡಿಪಿಐ ಪಕ್ಷದ ಎಲ್ಲ ನಾಯಕರು, ಕಾರ್ಯಕರ್ತರು, ಸರಕಾರದ ಎಲ್ಲ ಇಲಾಖೆಗಳು, ಆಸ್ಪತ್ರೆ ಮತ್ತಿತರ ಅವಶ್ಯಕ ಸಂಸ್ಥೆಗಳು ನಿಸ್ವಾರ್ಥ ಸೇವೆ ಸಲ್ಲಿಸಲು ಸಿದ್ಧರಾಗಿದ್ದಾರೆ. ಈ ಬಗ್ಗೆ ರಾಜ್ಯ ನಾಯಕರು ಎಲ್ಲ ಕಾರ್ಯಕರ್ತರಿಗೆ ಆದೇಶ ನೀಡಿದ್ದಾರೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News