ಲಾಕ್‌ಡೌನ್ ಕಟ್ಟುನಿಟ್ಟಿನ ಜಾರಿಗೆ ಎಲ್ಲರ ಸಹಕಾರ ಅಗತ್ಯ: ಸಚಿವ ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ, ಎ.27: ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಲಾಕ್‌ಡೌನ್ ಜಿಲ್ಲೆಯಲ್ಲಿ ಕಟ್ಟುನಿಟ್ಟಿನಿಂದ ಜಾರಿಗೊಳಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ನೂತನ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಹಿರಿಯ ಅಧಿಕಾರಿಗಳ ಪರಿಶೀಲನಾ ಸಭೆ ನಡೆಸಿದರು. ಲಾಕ್‌ಡೌನ್ ಕುರಿತಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಿನಿಂದ ಪೊಲೀಸ್ ಇಲಾಖೆ ಜಾರಿಗೊಳಿಸಬೇಕು. ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿ ಇತ್ಯಾದಿಗಳಿಗಾಗಿ ನಿಗದಿಪಡಿಸಿದ ಸಮಯ ಹೊರತುಪಡಿಸಿ ಮನೆಯಿಂದ ಹೊರಗೆ ಬರಬಾರದು. ಎರಡನೇ ಅಲೆ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅತಿ ಅಗತ್ಯವಾಗಿದೆ ಎಂದು ಹೇಳಿದರು.
ಬೆಂಗಳೂರಿನಿಂದ ಬರುವವರ ಮೇಲೆ ನಿಗಾ: ಬೆಂಗಳೂರಿನಿಂದ ಆಗಮಿಸುವವರ ಮೇಲೆ ಕಳೆದ ಬಾರಿಯಂತೆ ಈ ಬಾರಿಯೂ ನಿಗಾ ಇರಿಸಲು ಕ್ರಮ ಕೈಗೊಳ್ಳಬೇಕು. ಅವರು ಕಡ್ಡಾಯವಾಗಿ ಹೋಂ ಐಸೋಲೇಷನ್‌ನಲ್ಲಿರುವುದನ್ನು ಗ್ರಾಮಗಳಲ್ಲಿ ರಚಿಸಲಾಗಿರುವ ಟಾಸ್ಕ್‌ಫೋರ್ಸ್ ಸಮಿತಿ ಖಾತರಿ ಪಡಿಸಿಬೇಕು. ಆರಂಭದ ದಿನಗಳಲ್ಲಿ ಕನಿಷ್ಠ ಅವರ ದೇಹದ ತಾಪಮಾನವನ್ನು ಎರಡು ದಿನಗಳಿಗೊಮ್ಮೆ ಪರಿಶೀಲಿಸಲು ವ್ಯವಸ್ಥೆ ಮಾಡಬೇಕು. ಅವರಿಗೆ ಕನಿಷ್ಠ ವೈದ್ಯಕೀಯ ಸೇವೆಯನ್ನು ಮನೆಗೆ ತಲುಪಿಸಿದರೆ ಆಸ್ಪತ್ರೆಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಾಧ್ಯವಿದೆ ಎಂದು ಹೇಳಿದರು.
ತಾಲೂಕುಗಳ ವ್ಯವಸ್ಥೆ ಪರಿಶೀಲನೆ: ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ವ್ಯವಸ್ಥಿತವಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಪರಿಶೀಲನೆಗೆ ಎಲ್ಲಾ ತಾಲೂಕುಗಳಿಗೆ ಭೇಟಿ ನೀಡಿ ಅಧಿಕಾರಿಗಳ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಭೆಯನ್ನು ನಡೆಸಲಾಗುವುದು ಎಂದರು.
ಕಂಟೈನ್‌ಮೆಂಟ್ ವಲಯ: ಸರ್ಕಾರದ ಮಾರ್ಗಸೂಚಿ ಪ್ರಕಾರ ನಿಗದಿತ ಸಂಖ್ಯೆಯ ಕೊರೋನ ಪಾಸಿಟಿವ್ ಕಂಡು ಬರುವ ಪ್ರದೇಶವನ್ನು ಕಂಟೈನ್‌ಮೆಂಟ್ ವಲಯ ಎಂದು ಗುರುತಿಸಲಾಗುವುದು. ಅಂತಹ ಕಡೆಗಳಲ್ಲಿ ಅಗತ್ಯವಿದ್ದರೆ ಸ್ಥಳೀಯಾಡಳಿತದಿಂದ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಹೇಳಿದರು.
ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮೀಪ್ರಸಾದ್ ಮಾತನಾಡಿ, ಲಾಕ್‌ಡೌನ್ ಕುರಿತು ಸಾರ್ವಜನಿಕರಿಗೆ ಅಟೋ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ವಾರಾಂತ್ಯ ಕರ್ಫ್ಯೂ ಅವಧಿಯಲ್ಲಿ ಜನತೆ ಉತ್ತಮವಾಗಿ ಸಹಕಾರ ನೀಡಿದ್ದು, ಮಾರ್ಗಸೂಚಿ ಉಲ್ಲಂಘಿಸಿದ ಪ್ರಕರಣಗಳಲ್ಲಿ ದಂಡ ಹಾಗೂ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಪಂ ಸಿಇಓ ಎಂ.ಎಲ್.ವೈಶಾಲಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ರೋಟರಿ ಚಿತಾಗಾರದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸಲು ಸೌದೆ ಮತ್ತು 50ಕ್ಕೂ ಅಧಿಕ ಸಿಲಿಂಡರ್‌ಗಳನ್ನು ದಾಸ್ತಾನು ಮಾಡಲಾಗಿದೆ. ಇಂತಹ ಶವಗಳನ್ನು ವೈದ್ಯಕೀಯ ಮಾದರಿಯಲ್ಲಿಯೇ ಅಂತ್ಯಕ್ರಿಯೆ ನಡೆಸಲು ಕ್ರಮಕೈಗೊಳ್ಳಲಾಗಿದೆ. ಇವಲ್ಲದೆ, ಗೋಪಿಶೆಟ್ಟಿಕೊಪ್ಪ ಬಳಿಯೂ ಕೂಡಾ ಪರ್ಯಾಯ ಸ್ಥಳದ ಪರಿಶೀಲನೆಯನ್ನು ತಹಶೀಲ್ದಾರ್‌ರೊಂದಿಗೆ ನಡೆಸಲಾಗಿದೆ. ಅವಶ್ಯಕತೆ ಬಿದ್ದರೆ ಅಲ್ಲಿಯೂ ಕೂಡಾ ವ್ಯವಸ್ಥೆ ಮಾಡಲಾಗುವುದು.
-ಚಿದಾನಂದ ವಠಾರೆ, ಆಯುಕ್ತ
ಮದುವೆಗಳಲ್ಲಿ 50ಕ್ಕೂ ಹೆಚ್ಚು ಜನ ಸೇರಿದರೆ ಅದಕ್ಕೆ ಸಂಬಂಧಪಟ್ಟ ಪಿಡಿಓ ಅಥವಾ ಪುರಸಭೆಯ ಮುಖ್ಯ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ಮನೆಯ ಒಳಗೆ ಯಾವುದೇ ಕಾರ್ಯಕ್ರಮ ಮಾಡಲು ಅಭ್ಯಂತರವಿಲ್ಲ. ನಾಳೆಯಿಂದ ನಡೆಯುವ ಲಾಕ್‌ಡೌನ್‌ನಲ್ಲಿ ಬೆಳಗ್ಗೆ 6 ರಿಂದ 10 ರವರೆಗೆ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಮುಕ್ತ ಅವಕಾಶ ಮಾಡಿಕೊಡಲಾಗಿದೆ.
-ಕೆ.ಬಿ. ಶಿವಕುಮಾರ್, ಜಿಲ್ಲಾಧಿಕಾರಿಬೆಳಗ್ಗೆ 6ರಿಂದ 10ರವರೆಗೆ ಜಿಲ್ಲೆಯಲ್ಲಿ ಬಾರ್ ಮತ್ತು ವೈನ್‌ಶಾಪ್‌ಗಳು ಕಾರ್ಯನಿರ್ವಹಿಸಬೇಕು. ಕೆಲವು ಬಾರ್ ಹಾಗೂ ವೈನ್‌ಶಾಪಗಳಲ್ಲಿ ಒಳಗೆ ಆಹಾರ ಮತ್ತು ಮದ್ಯ ಸೇವಿಸಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂಬ ದೂರು ಬಂದಿವೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಂಡು ಅಂತಹ ಬಾರ್‌ಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು.
-ಕೆ.ಎಸ್.ಈಶ್ವರಪ್ಪ, ಸಚಿವ