ಕೊರೋನ ಕರ್ಫ್ಯೂ ನಡುವೆ ಜಾತ್ರೆ ನಡೆಸಿದ ಆರೋಪ: 14 ಮಂದಿ ಬಂಧನ
Update: 2021-04-27 18:35 IST
ಗುಂಡ್ಲುಪೇಟೆ, ಎ.27: ಕೊರೋನ ಕರ್ಫ್ಯೂ ಇದ್ದರೂ ಗ್ರಾಮದಲ್ಲಿ ಗುಂಪು ಗೂಡಿ ಜಾತ್ರೆ ನಡೆಸಿದ ಆರೋಪದ ಮೇಲೆ 14 ಜನರ ವಿರುದ್ಧ ಗುಂಡ್ಲುಪೇಟೆ ಪೊಲೀಸರು ಪ್ರಕರಣ ದಾಖಲಿಸಿ, ಬಂಧಿಸಿದ್ದಾರೆ.
ಕೊರೋನ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಜಾತ್ರೆ ನಡೆಸಲು ತಾಲೂಕು ಆಡಳಿತ ಅನುಮತಿ ನೀಡದಿದ್ದರೂ ರಥೋತ್ಸವ ಆಚರಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ರವಿಶಂಕರ್, ಡಿವೈಎಸ್ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ನೇತೃತ್ವದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಮಹದೇವಸ್ವಾಮಿ, ಸಬ್ ಇನ್ಸ್ಪೆಕ್ಟರ್ ರಾಜೇಂದ್ರ ಹಾಗೂ ಸಿಬ್ಬಂದಿ ಪರಿಶೀಲಿಸಿದರು.
ತಾಲೂಕಿನ ಹೊಂಗಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಗುರುವಿನಗುಡ್ಡದ ಬಳಿ ಇರುವ ಕೋಡಿಬಸವೇಶ್ವರ ದೇವಾಲಯದಿಂದ ಗ್ರಾಮದ ಶಾಲೆ ಮುಂಭಾಗದವರೆಗೂ ರಥವನ್ನು ಎಳೆದು ತಂದವರ ವಿರುದ್ಧ ಕರ್ಫ್ಯೂ ಉಲ್ಲಂಘಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿ, 14 ಜನರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.