ಮೇ 2ಕ್ಕೆ ಉಪಚುನಾವಣೆ ಫಲಿತಾಂಶ: ವಿಜಯೋತ್ಸವಕ್ಕೆ ನಿರ್ಬಂಧ ಹೇರಿ ಚುನಾವಣಾ ಆಯೋಗ ಆದೇಶ
Update: 2021-04-27 20:22 IST
ಬೆಂಗಳೂರು, ಎ. 27: ರಾಜ್ಯದ ಬೆಳಗಾವಿ ಲೋಕಸಭಾ ಕ್ಷೇತ್ರ, ರಾಯಚೂರು ಜಿಲ್ಲೆಯ ಮಸ್ಕಿ ಹಾಗೂ ಬೀದರ್ ಜಿಲ್ಲೆಯ ಬಸವಕಲ್ಯಾಣ ಕ್ಷೇತ್ರಗಳ ಉಪಚುನಾವಣೆ ಮತ ಎಣಿಕೆ ಕಾರ್ಯ ಮೇ 2ರಂದು ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದ್ದು, ಕೋವಿಡ್ ಎರಡನೆ ಅಲೆ ಹಿನ್ನೆಲೆಯಲ್ಲಿ ವಿಜಯೋತ್ಸವಕ್ಕೆ ನಿರ್ಬಂಧ ಹೇರಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ಇದೇ ವೇಳೆ ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ, ಪಾಂಡಿಚೇರಿ ಸೇರಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲಿದ್ದು, ರಾಜಕೀಯ ಪಕ್ಷಗಳ ಕಾರ್ಯಕರ್ತರು ಯಾವುದೇ ಕಾರಣಕ್ಕೂ ವಿಜಯೋತ್ಸವ ಆಚರಿಸಲು ಅವಕಾಶ ಇಲ್ಲ. ಅಲ್ಲದೆ, ಮತ ಎಣಿಕೆ ಕೇಂದ್ರದ ಸುತ್ತಮುತ್ತ ಜನ ಸೇರುವುದಕ್ಕೂ ಅವಕಾಶವಿಲ್ಲ. ಗೆದ್ದ ಅಭ್ಯರ್ಥಿಗಳು ತನ್ನ ಇಬ್ಬರು ಬೆಂಬಲಿಗರೊಡನೆ ಮಾತ್ರ ಚುನಾವಣಾ ಫಲಿತಾಂಶದ ಪ್ರಮಾಣ ಪತ್ರವನ್ನು ಪಡೆದುಕೊಳ್ಳಲು ಅವಕಾಶ ಇರುತ್ತದೆ ಎಂದು ಆಯೋಗ ಸ್ಪಷ್ಟಪಡಿಸಿದೆ.