ಸಾರಿಗೆ ನೌಕರರ ಜತೆಗೆ ಸರಕಾರ ಮಾತುಕತೆ ನಡೆಸಲಿ: ಹೈಕೋರ್ಟ್ ನಿರ್ದೇಶನ
ಬೆಂಗಳೂರು, ಎ.27: ಸಾರಿಗೆ ನೌಕರರ ಮುಷ್ಕರ ವಿಚಾರದಲ್ಲಿ ಸಲ್ಲಿಕೆಯಾಗಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಸೇವೆಯಿಂದ ವಜಾಗೊಂಡಿರುವ ಹಾಗೂ ಅಮಾನತುಗೊಂಡಿರುವ ಸಾರಿಗೆ ನೌಕರರು ತಮ್ಮ ವಿರುದ್ಧದ ಆದೇಶವನ್ನು ವಾಪಸ್ ಪಡೆಯಲು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಮನವಿ ಸಲ್ಲಿಸಬೇಕು. ಪ್ರಾಧಿಕಾರಗಳು ಎರಡು ವಾರಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಸೂಚಿಸಿದೆ. ಜತೆಗೆ ಸಾರಿಗೆ ನೌಕರರ ಜತೆಗೆ ಸರಕಾರ ಮಾತುಕತೆ ನಡೆಬೇಕು ಎಂದು ಸೂಚಿಸಿದೆ.
ಸಾರಿಗೆ ನೌಕರರ ಮುಷ್ಕರದಿಂದ ಉಂಟಾಗಿರುವ ನಷ್ಟವನ್ನು ವಸೂಲಿ ಮಾಡಲು ಸರಕಾರಕ್ಕೆ ನಿರ್ದೇಶಿಸಲು ಕೋರಿ ಸಮರ್ಪಣಾ ಸ್ವಯಂ ಸೇವಾ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ನ್ಯಾಯಪೀಠ, ಈ ಸೂಚನೆ ನೀಡಿದೆ.
ಮುಷ್ಕರ ಹಿಂಪಡೆದು ನೌಕರರು ಪಟ್ಟು ಸಡಿಲಿಸಿದ್ದಾರೆ. ಸರಕಾರವೂ ಈಗ ಪಟ್ಟು ಸಡಿಲಿಸಿ ಮಾತುಕತೆಗೆ ಮುಂದಾಗಬೇಕು. ಮೇ 12ರೊಳಗೆ ಸರಕಾರ ಮಾತುಕತೆ ನಡೆಸಬೇಕು. ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಪಡಿಸಲು ಯತ್ನಿಸಬೇಕು. ಮಾತುಕತೆಯ ಬಳಿಕ ಸಮಸ್ಯೆ ಮುಂದುವರಿಯಬಾರದು ಎಂದು ನ್ಯಾಯಪೀಠವು ಸರಕಾರಕ್ಕೆ ಸೂಚನೆ ನೀಡಿದೆ.
ಮೇ 12ರೊಳಗೆ ಮಾತುಕತೆ ನಡೆಸದಿದ್ದರೆ ಮಧ್ಯಸ್ಥಿಕೆಗೆ ನಿವೃತ್ತ ನ್ಯಾಯಾಧೀಶರನ್ನು ನೇಮಿಸಲಾಗುವುದು ಎಂದು ತಿಳಿಸಿತು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯದಲ್ಲಿ ಇತ್ತೀಚೆಗೆ ಸಾರಿಗೆ ನೌಕರರು ನಡೆಸಿದ್ದ ಮುಷ್ಕರದಿಂದ ಪ್ರಯಾಣಿಕರಿಗೆ ಬಾರೀ ತೊಂದರೆ ಉಂಟಾಗಿತ್ತು. ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ನೌಕರರ ಬೇಡಿಕೆ ಈಡೇರಿಸಲು ಆಗುವುದಿಲ್ಲ ಎಂದು ಹೇಳಿದ್ದ ರಾಜ್ಯ ಸರಕಾರ ಮುಷ್ಕರ ನಿರತ ಹಲವು ನೌಕರರನ್ನು ಅಮಾನತು, ವಜಾ ಮಾಡಿತ್ತು.
ನಂತರದ ದಿನಗಳಲ್ಲಿ ಹೈಕೋರ್ಟ್ ಸಾರಿಗೆ ನೌಕರರಿಗೆ ಕೆಲಸಕ್ಕೆ ಹಾಜರಾಗುವಂತೆ ಆದೇಶ ಮಾಡಿದ ಹಿನ್ನೆಲೆಯಲ್ಲಿ ಕೆಲಸಕ್ಕೆ ಹಾಜರಾಗಿದ್ದರು.