×
Ad

ಪ್ರೀತಿಗೆ ಅಡ್ಡಿಯಾದ ಸಹೋದರನ ಹತ್ಯೆಗೈದ ಪ್ರಕರಣ: ನಟಿ ಶನಾಯಾ ಸೇರಿ 8 ಮಂದಿಗೆ ನ್ಯಾಯಾಂಗ ಬಂಧನ

Update: 2021-04-27 22:52 IST
Photo: Facebook.com/shanayakatweofficial

ಹುಬ್ಬಳ್ಳಿ, ಎ.27: ಸಹೋದರನನ್ನು ಹತ್ಯೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶನಾಯಾ ಕಾಟವೆ ಸೇರಿ ಎಂಟು ಮಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

ತನ್ನ ಸಹೋದರ ರಾಕೇಶ ಕಾಟವೆ ಎಂಬವರನ್ನು ಕೊಲೆ ಮಾಡಿ, ಅವರ ರುಂಡ ಮತ್ತು ಮುಂಡ ಬೇರ್ಪಡಿಸಿ ಎಸೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶನಾಯಾರನ್ನು ಬಂಧಿಸಲಾಗಿದ್ದು, ಜೊತೆಗೆ ಇತರೆ ಏಳು ಮಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಶನಾಯಾ ಹಾಗೂ ಕೊಲೆ ಆರೋಪಿಯಾಗಿರುವ ನಿಯಾಝ್ ಕಟಿಗಾರ ಹೈಸ್ಕೂಲಿನಿಂದಲೇ ಪ್ರೀತಿಸುತ್ತಿದ್ದರು. ಇದಕ್ಕೆ ಶನಾಯಾ ಸಹೋದರ ರಾಕೇಶ ಕಾಟವೆ ವಿರೋಧ ವ್ಯಕ್ತಪಡಿಸಿದ್ದ. ಹೀಗಾಗಿ ನಟಿ ಶನಾಯಾ ತನ್ನ ಸಹೋದರ ರಾಕೇಶ ಕಾಟವೆ ಅವರನ್ನು ಕೊಲೆ ಮಾಡಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಪಿ. ಕೃಷ್ಣಕಾಂತ ಹೇಳಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ನಿಯಾಝ್ ಅಹ್ಮದ್ ಸೈಫುದ್ದೀನ್ ಕಟಿಗಾರ(21), ತೌಸೀಫ್ ಅಬ್ದುಲ್ ರೆಹಮಾನ್ ಚನ್ನಾಪುರ(21), ಅಲ್ತಾಫ್ ತಾಜುದ್ದೀನ್ ಮುಲ್ಲಾ (24) ಹಾಗೂ ಅಮನ್ ಅಲಿಯಾಸ್ ಮಹಮ್ಮದ್ ಉಮತ್ (19) ಎಂಬವರನ್ನು ಬಂಧಿಸಲಾಗಿತ್ತು. ಹೆಚ್ಚಿನ ವಿಚಾರಣೆ ನಂತರ ಶನಾಯಾ ಜತೆ ಮಲ್ಲಿಕ್, ಫಿರೋಜ್, ಸೈಫುದ್ದೀನ್ ಅವರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದರು.

ರಾಕೇಶ ಕಾಟವೆ ತಮ್ಮ ಪ್ರೇಮಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಕುಪಿತನಾದ ಆರೋಪಿ ನಿಯಾಝ್ ಕೊಲೆಗೆ ಸಂಚು ರೂಪಿಸಿದ್ದ. ಮಾತುಕತೆಗಾಗಿ ರಾಕೇಶ ಅವರನ್ನು ಕರೆಸಿ, ಮೂವರು ಸಹಚರರೊಂದಿಗೆ ಹತ್ಯೆ ಮಾಡಿದ್ದ. ಕೃತ್ಯ ತಿಳಿಯದಂತೆ ರುಂಡ ಬೇರ್ಪಡಿಸಿ ದೇವರಗುಡಿಹಾಳದ ವ್ಯಾಪ್ತಿಯಲ್ಲಿ, ಮುಂಡ ಹಾಗೂ ಕೈ- ಕಾಲುಗಳನ್ನು ಕತ್ತರಿಸಿ ಅರೆಬರೆ ಸುಟ್ಟು ಹುಬ್ಬಳ್ಳಿಯ ಕೇಶ್ವಾಪುರ ಸಮೀಪದ ಸಂಸ್ಕಾರ ಶಾಲೆ ಬಳಿ ಎಸೆದಿದ್ದರು ಎಂದು ಕೃಷ್ಣಕಾಂತ ಅವರು ಮಾಹಿತಿ ನೀಡಿದರು.

ಶನಾಯಾ, ತೆಲುಗಿನಲ್ಲಿ ‘ಇದಂ ಪ್ರೇಮಂ ಜೀವನಂ’, ಕನ್ನಡದಲ್ಲಿ ಒಂದು ಗಂಟೆಯ ಕತೆ ಚಿತ್ರದಲ್ಲಿ ನಟಿಸಿದ್ದಳು. ಅವಳ ನಟನೆಯ ‘ಛೋಟಾ ಬಾಂಬೆ’ ಎಂಬ ಚಿತ್ರ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News