ರೈಲ್ವೆ ನಿಲ್ದಾಣದಲ್ಲಿ ಕಾರ್ಮಿಕರಿಗೆ ಊಟ ಕೊಟ್ಟು ಮಾನವೀಯತೆ ಮೆರೆದ ಸ್ಥಳೀಯರು

Update: 2021-04-27 17:28 GMT

ಯಾದಗಿರಿ, ಎ.27: ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ಹಸಿವಿನಿಂದ ಕಂಗೆಟ್ಟ ವಲಸೆ ಕಾರ್ಮಿಕರು ಸಾರ್ವಜನಿಕರಲ್ಲಿ ಊಟ ನೀಡುವಂತೆ ಮನವಿ ಮಾಡಿಕೊಂಡಿದ್ದು, ಈ ಮನವಿಗೆ ಸ್ಪಂದಿಸಿರುವ ಸ್ಥಳೀಯರು ಊಟದ ವ್ಯವಸ್ಥೆ ಕಲ್ಪಿಸಿ ಮಾನವೀಯತೆ ಮೆರೆದಿದ್ದಾರೆ.

ಕೊರೋನ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ರಾಜ್ಯಾದ್ಯಂತ 14 ದಿನ ಕಠಿಣ ಕರ್ಫ್ಯೂ ಜಾರಿ ಮಾಡಿದ ಆದೇಶ ತಿಳಿಯುತ್ತಿದ್ದಂತೆಯೇ ಹಲವರು ಸ್ವಗ್ರಾಮಕ್ಕೆ ಗುಳೆ ಹೊರಟಿದ್ದಾರೆ. ಯಾದಗಿರಿಯಲ್ಲಿದ್ದ ಮಧ್ಯಪ್ರದೇಶ ಮೂಲದ ನೂರಾರು ವಲಸೆ ಕಾರ್ಮಿಕರು ತಮ್ಮೂರಿಗೆ ಹೋಗಲು ಸೋಮವಾರ ರಾತ್ರಿಯೇ ರೈಲು ನಿಲ್ದಾಣಕ್ಕೆ ಆಗಮಿಸಿದ್ದರು.

ರಾತ್ರಿಯಿಂದ ಊಟ ಮಾಡದೆ ರೈಲ್ವೆ ನಿಲ್ದಾಣದಲ್ಲೇ ಮಲಗಿದ್ದ ಕಾರ್ಮಿಕರು, ಕೈಯಲ್ಲಿ ಹಣವಿಲ್ಲ ನಮಗೆ ಊಟದ ವ್ಯವಸ್ಥೆ ಮಾಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಇದಕ್ಕೆ ಸ್ಥಳೀಯರು ಸ್ಪಂದಿಸಿ ಊಟದ ವ್ಯವಸ್ಥೆ ಮಾಡಿದ್ದಾರೆ.

ಮಧ್ಯಪ್ರದೇಶ ರಾಜ್ಯದವರಾದ ಈ ಎಲ್ಲ ಕಾರ್ಮಿಕರು ಯಾದಗಿರಿ ಜಿಲ್ಲೆಯ ಸೈದಾಪುರದಲ್ಲಿ ರಸ್ತೆ ಕಾಮಗಾರಿ ಮಾಡುತ್ತಿದ್ದರು. ತಮ್ಮ ಊರಿಗೆ ಹೋಗಬೇಕು ಎಂದರೂ ಗುತ್ತಿಗೆದಾರ ಹೆಚ್ಚಿನ ಹಣ ನೀಡಿಲ್ಲ. ಇರೋ ಅಲ್ಪಸ್ವಲ್ಪ ಹಣದಲ್ಲಿ ರೈಲು ಟಿಕೆಟ್‍ಗೆ ಆಗಲಿದೆ. ಆದರೆ ಊಟಕ್ಕೆ ಹಣವಿಲ್ಲ ಎಂದು ಕಾರ್ಮಿಕರು ಅಳಲು ತೋಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News