×
Ad

ರೆಮ್‍ಡೆಸಿವಿರ್, ಆಕ್ಸಿಜನ್ ಪೂರೈಕೆ ಹೆಚ್ಚಿಸಿ: ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ

Update: 2021-04-27 23:30 IST

ಬೆಂಗಳೂರು, ಎ.27: ಕೊರೋನ ಸೋಂಕು ನಿಯಂತ್ರಣಕ್ಕೆ ಈ ಕೂಡಲೇ ರೆಮ್‍ಡಿಸಿವಿರ್ ಹಾಗೂ ಆಕ್ಸಿಜನ್ ಪೂರೈಕೆ ಹೆಚ್ಚಿಸಬೇಕೆಂದು ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.      

ಅತ್ಯಗತ್ಯ ಔಷಧಿಗಳ ಸಮಸ್ಯೆ ಹಾಗೂ ಆಕ್ಸಿಜನ್ ಕೊರತೆಯಿದೆ ಎಂಬ ಹಿನ್ನೆಲೆಯಲ್ಲಿ ಕರ್ನಾಟಕ ಖಾಸಗಿ ಆಸ್ಪತ್ರೆಗಳ ಸಂಘಟನೆ(ಫನಾ) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ನ್ಯಾಯಪೀಠ, ಈ ನಿರ್ದೇಶನ ನೀಡಿದೆ. 

ಅರ್ಜಿದಾರರ ಪರ ವಾದಿಸಿದ ವಕೀಲರು, ಸರಕಾರಕ್ಕೆ 100 ರೆಮ್‍ಡಿಸಿವಿರ್ ಬೇಕಾಗಿದೆ ಎಂದು ಕೇಳಿದರೆ 25 ಮಾತ್ರ ಪೂರೈಸುತ್ತಿದ್ದಾರೆ. ಹೀಗಾಗಿ, ಗಂಭೀರ ಸಮಸ್ಯೆ ಇದ್ದವರಿಗೆ ಮಾತ್ರ ನೀಡಲಾಗುತ್ತಿದೆ. ಸರಕಾರದ ಬಳಿ ಹೇರಳವಾಗಿ ರೆಮ್‍ಡಿಸಿವಿರ್ ಇದ್ದರೂ ಆಸ್ಪತ್ರೆಗಳಿಗೆ ಒದಗಿಸುತ್ತಿಲ್ಲ ಎಂದು ಪೀಠಕ್ಕೆ ತಿಳಿಸಿದರು.  

ಬೇಡಿಕೆಯ ಶೇ.50ರಷ್ಟು ಮಾತ್ರ ಆಕ್ಸಿಜನ್ ಲಭ್ಯವಿದೆ. ಖಾಸಗಿ ಪೂರೈಕೆದಾರರಿಂದ ಆಕ್ಸಿಜನ್ ಖರೀದಿಸಲಾಗುತ್ತಿದೆ. ಹೀಗಾಗಿ ಬೆಲೆಯೂ ನಾಲ್ಕೈದು ಪಟ್ಟು ಹೆಚ್ಚಳವಾಗಿದೆ ಎಂದು ಪೀಠಕ್ಕೆ ತಿಳಿಸಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠ, ಆಕ್ಸಿಜನ್ ಮತ್ತು ರೆಮ್‍ಡಿಸಿವಿರ್ ಕೊರತೆಯಿಂದ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಆಕ್ಸಿಜನ್, ರೆಮ್‍ಡಿಸಿವಿರ್ ಲಭ್ಯತೆ ಬಗ್ಗೆ ನಿತ್ಯ ಪ್ರಕಟಿಸಬೇಕು. ಕೇಂದ್ರದಿಂದ ಹಂಚಿಕೆಯಾದ 802 ಮೆಟ್ರಿಕ್ ಟನ್ ಆಕ್ಸಿಜನ್ ಒದಗಿಸಿ. ಇಲ್ಲವಾದರೆ ಎ.30ರ ವೇಳೆಗೆ 600 ಮೆಟ್ರಿಕ್ ಟನ್ ಕೊರತೆ ಕಾಣಿಸಿಕೊಳ್ಳುತ್ತದೆ. ರಾಜ್ಯ ಸರಕಾರ ರೆಮ್‍ಡಿಸಿವಿರ್ ಪೂರೈಕೆ ಹೆಚ್ಚಿಸಬೇಕು. ಈ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ಎ.29ಕ್ಕೆ ಮಾಹಿತಿ ನೀಡಬೇಕೆಂದು ಸರಕಾರಕ್ಕೆ ಸೂಚನೆ ನೀಡಿ, ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News