ಮೈಸೂರು ಜಿಲ್ಲಾಡಳಿತ, ಉಸ್ತುವಾರಿ ಸಚಿವರು ಬದುಕಿದ್ದಾರ?: ಶಾಸಕ ಸಾ.ರಾ.ಮಹೇಶ್ ಆಕ್ರೋಶ

Update: 2021-04-28 07:55 GMT

ಮೈಸೂರು, ಎ.28: ಕೊರೋನದಿಂದ  ಜನ ಸಾಯುತ್ತಿದ್ದಾರೆ, ಆದರೆ ನೀವು ಜನರಿಗೆ ಸುಳ್ಳುಗಳನ್ನು ಹೇಳುತ್ತಿದ್ದೀರಿ, ಜಿಲ್ಲಾಡಳಿತ ಸತ್ತು ಹೋಗಿದಿಯಾ? ಜಿಲ್ಲಾ ಉಸ್ತುವಾರಿ ಸಚಿವರು ಬದುಕಿದ್ದಾರ? ಎಂದು ಶಾಸಕ ಸಾ.ರಾ.ಮಹೇಶ್ ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ನಗರದ ತಮ್ಮ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತ ಕೊರೋನ ನಿಯಂತ್ರಣ ಮಾಡುವಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಜನರಿಗೆ ಸುಳ್ಳುಗಳನ್ನು ಹೇಳುತ್ತಿದೆ. ಇರುವ ಸತ್ಯವನ್ನು ಒಪ್ಪಿಕೊಳ್ಳಿ ನಿಮ್ಮ ಅಸಹಾಯಕತೆಯನ್ನು ಜನರ ಮುಂದೆ ಇಡಿ ಎಂದು ಹೇಳಿದರು.

ಜಿಲ್ಲೆಯಲ್ಲಿ ಸಮರ್ಪಕ ಚಿಕಿತ್ಸೆ ದೊರೆಯದೆ ಜನ ಸಾಯುತ್ತಿದ್ದಾರೆ. ನನ್ನ ಕ್ಷೇತ್ರದ ದಾಕ್ಷಾಯಿಣಿ ಎಂಬ 36 ವರ್ಷದ ಹೆಣ್ಣುಮಗಳು ಕೊರೋನ ಸೋಂಕಿನಿಂದ ಬಳಲುತ್ತಿದ್ದು ಆಕೆಯನ್ನು ನಗರದ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಕೆಗೆ ವೆಂಟಿಲೇಟರ್ ಬೇಕು ಎಂದು ವೈದ್ಯರು ಸೂಚಿಸಿದ ಮೇಲೆ ಮೇಲೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮಂಗಳವಾರ ಮಧ್ಯಾಹ್ನದಿಂದ 5 ಬಾರಿ ದೂರವಾಣಿ ಕರೆ ಮಾಡಿದ್ದೇನೆ. ಅವರು ಒಂದು  ವೆಂಟಿಲೇಟರ್ ಕೊಡಲಿಲ್ಲ, ಹೋಗಲಿ ಎಂದು ನಮ್ಮ ಕೆ.ಆರ್.ನಗರ ಸರ್ಕಾರಿ ಆಸ್ಪತ್ರೆಯಲ್ಲಿದ್ದ ವೆಂಟಿಲೇಟರ್ ಅನ್ನು ಮೈಸೂರಿಗೆ ಶಿಫ್ಟ್ ಮಾಡಿಸಿದರೂ ಅದನ್ನು ಅಳವಡಿಸಲು ಮೆಕ್ಯಾನಿಕ್ ಬರಬೇಕು. ನಾಳೆ ಬೆಳಗ್ಗೆ ಅಳವಡಿಸಲು ಕ್ರಮ ಕೈಗೊಳ್ಳಲಾಗವುದು ಎಂದರು. ಆದರೆ ಬೆಳಗಾಗುವಷ್ಟರಲ್ಲಿ ಆ ಹೆಣ್ಣುಮಗಳು ಸಾವನ್ನಪ್ಪಿದ್ದಾಳೆ.  ಇದಕ್ಕೆ ಹೊಣೆ ಯಾರು? ಇದು ಒಂದು ಉದಾಹರಣೆಯಷ್ಟೆ. ಇಂತಹವು ಬಹಳಷ್ಟು ಘಟನೆಗಳು ದಿನ ನಿತ್ಯ ನಡೆಯುತ್ತಿವೆ ಎಂದು ಭಾವುಕರಾದರು.

ಕಾರು ಚಕ್ರ ಪಂಕ್ಚರ್ ಹಾಕಿದ ಹಾಗಲ್ಲ!  

ಕಾರು ಚಕ್ರ ಬಿಚ್ಚಿ ಪಂಕ್ಚರ್ ಹಾಕುವುದನ್ನು ವೀಡಿಯೋ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಂಗಲ್ಲ ಜನರ ಸೇವೆ ಮಾಡುವುದು ಎಂದು ಪರೋಕ್ಷವಾಗಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಬಗ್ಗೆ ಶಾಸಕ ಸಾ.ರಾ.ಮಹೇಶ್ ಹರಿಹಾಯ್ದರು.

ಜನ ಇಷ್ಟೆಲ್ಲಾ ಸಾಯುತ್ತಿದ್ದಾರೆ. ಆದರೆ ಇವರು ಎಲ್ಲಾ ಸೌಲಭ್ಯಗಳನ್ನು ಕೊಡುತಿದ್ದೇವೆ ಎಂದು ಹೇಳುತ್ತಾರೆ.  ಹಾಗಿದ್ದ ಮೇಲೆ ಜನ ಐಸಿಯು, ಆಕ್ಸಿಜನ್ ಮತ್ತು ವೆಂಟಿ ಲೇಟರ್ ಇಲ್ಲದೆ ಏಕೆ ಸಾಯುತ್ತಿದ್ದಾರೆ. ನೀವು ಯಾವ ಕ್ರಮ ವಹಿಸಿದ್ದೀರಿ  ಎಂದು ಸಾರ್ವಜನಿಕವಾಗಿ ಹೇಳಿ ಎಂದು ಒತ್ತಾಯಿಸಿದರು.

 ಜಿಲ್ಲಾ ಉಸ್ತುವಾರಿ ಸಚಿವರಿಗಿಂತ ಜಿಲ್ಲಾಧಿಕಾರಿಗಳೇ ಜಿಲ್ಲೆಗೆ ಸುಪ್ರೀಂ ಆಗಿದ್ದಾರೆ. ಸರ್ಕಾರ ಕೊಡುವ ಹಣವನ್ನು ಯಾತಕ್ಕಾಗಿ ಬಳಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಲಿ ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News