ಸುದ್ದಿ ಮಾಧ್ಯಮದವರೂ ಮರೆತರು, ಜನಪ್ರತಿನಿಧಿಗಳು ವಿಳಂಬ ಮಾಡಿದರು: ಸಂಸದ ಪ್ರತಾಪ್ ಸಿಂಹ
ಮೈಸೂರು, ಎ.28: ಕೊರೋನ ವಿಚಾರವನ್ನು ಸುದ್ದಿ ಮಾಧ್ಯಮದವರೂ ಮರೆತರು, ಜನಪ್ರತಿನಿಧಿಗಳು ವಿಳಂಬ ಮಾಡಿದರು. ಇದು ಈ ಸೋಂಕು ಹೆಚ್ಚಲು ಕಾರಣವಾಯಿತು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ನಗರದ ತುಳಸಿದಾಸ್ ಆಸ್ಪತ್ರೆಯಲ್ಲಿ ಕೊರೋನ ಸೋಂಕಿತರ ಚಿಕಿತ್ಸೆಗೆ 100 ಆಕ್ಸಿಜನ್ ಬೆಡ್ ನಿರ್ಮಾಣ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ ಜೊತೆಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡುತ್ತಿದ್ದರು.
ಕಳೆದ ವರ್ಷ, ಎಪ್ರಿಲ್ ಮೇ ತಿಂಗಳಿನಲ್ಲಿ ಕೊರೋನ ಅಲೆ ಬಂತು, ಆಗ ಮಾಧ್ಯಮಗಳು ಜಾಗೃತಿ ಮೂಡಿಸುವ ಕೆಲಸಗಳನ್ನು ಮಾಡುತ್ತಿದ್ದವು. ಆದಾದ ಬಳಿಕ ಅಕ್ಟೋಬರ್, ನೆವೆಂಬರ್ ನಂತರ ಮಾಧ್ಯಮದವರು ಕೊರೋನ ವಿಚಾರವನ್ನು ಮರೆತರು. ಜನಪ್ರತಿನಿಧಿಗಳಾದ ನಾವು ಕೂಡಾ ವಿಳಂಬ ಮಾಡಿದೆವು. ಈ ನಡುವೆ ಅದು ಮತ್ತೆ ಬಂದು ಅಪ್ಪಳಿಸಿದೆ ಎಂದು ಹೇಳಿದ್ದಾರೆ.
ನಾವೆಲ್ಲರೂ ಸಾಂಘಿಕವಾಗಿ ಕೊರೋನ ಹೊರಟು ಹೋಯಿತು ಎಂದುಕೊಂಡಿದ್ದೆವು. ಆದರೆ ಅದು ಮತ್ತೆ ಬಂದು ಅಪ್ಪಳಿಸಿದೆ. ಈಗ ಮಾಧ್ಯಮದವರು ಗಮನಹರಿಸುತ್ತಿದ್ದಾರೆ, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡಿದ್ದೇವೆ ಎಂದರು.
ಕೊರೋನ ಇರಲಿ ಬಿಡಲಿ ಆಸ್ಪತ್ರೆಗಳಿಗೆ ಸೌಲಭ್ಯ ಕಲ್ಪಿಸುವುದು ಜನಪ್ರತಿನಿಧಿಗಳ ಕರ್ತವ್ಯವಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ನಾವೆಲ್ಲರೂ ಕೊರೋನ ಹೋಯಿತು ಎಂಬ ಭಾವನೆಯಲ್ಲಿ ಇದ್ದೆವು. ಆದರೆ ಅದು ವಾಪಸ್ ಬಂದಿದೆ. ಈ ಮೊದಲು ಯುಕೆ ಸ್ಪೇನ್, ಆಫ್ರಿಕನ ಸ್ಪೇನ್ ಎಂದು ಹೇಳಲಾಗುತ್ತಿತ್ತು, ಈಗ ಬೆಂಗಳೂರು ಸ್ಟ್ರೈನ್ ಎಂದು ಹೇಳಲಾಗುತ್ತಿದೆ. ಇದು ನಿರೀಕ್ಷೆಗೂ ಮೀರಿದಂತಹದು. ನೂರು ವರ್ಷಗಳ ಹಿಂದೆ ಬಂದಿದಂತ ರೋಗ, ಈಗ ಬಂದಿರುವುದರಿಂದ ನಾವು ಸ್ವಲ್ಪ ಗಲಿಬಿಲಿಗೊಳಗಾಗಿದ್ದೇವೆ ಎಂದು ಹೇಳಿದರು.