×
Ad

ಆರೋಗ್ಯಾಧಿಕಾರಿಗಳ ಎಡವಟ್ಟು: ಕೋವಿಡ್ ಲಸಿಕೆಗಾಗಿ ಕಾದು ಬಸವಳಿದ ಕಮ್ಮರಡಿ ಗ್ರಾಮಸ್ಥರು

Update: 2021-04-28 15:10 IST

ಶಿವಮೊಗ್ಗ, ಎ.28: ಕೋವಿಡ್ ಲಸಿಕೆಗೆ ಸಂಬಂಧಿಸಿ ಆರೋಗ್ಯಾಧಿಕಾರಿಗಳು ಮಾಡಿದ ಎಡವಟ್ಟಿನಿಂದ ತೀರ್ಥಹಳ್ಳಿ ತಾಲೂಕಿನ ಕಮ್ಮರಡಿ ಗ್ರಾಮಸ್ಥರು ಸಂಕಷ್ಟಕ್ಕೆ ಒಳಗಾದ ಘಟನೆ ವರದಿಯಾಗಿದೆ.

ಕಮ್ಮರಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯಾಧಿಕಾರಿಗಳು ಜನರಿಗೆ ನೀಡಿದ ಮಾಹಿತಿಯಿಂದ ಈ ಗೊಂದಲ ಉಂಟಾಗಿದೆ ಎನ್ನಲಾಗಿದೆ. ಆರೋಗ್ಯಾಧಿಕಾರಿಗಳು ಪ್ರಥಮ ಹಂತ ಹಾಗೂ ದ್ವಿತೀಯ ಹಂತದ ಲಸಿಕೆಯನ್ನು ಹಾಕಿಸಿಕೊಂಡವರಿಗೆ  ಬುಧವಾರ  ಒಂದೇ ದಿನ ಬರಲು ತಿಳಿಸಿದ್ದರೆನ್ನಲಾಗಿದೆ. ಆ ಭಾಗದ ಅನೇಕ ಗ್ರಾಮಸ್ಥರು ಕೊರೋನ ಲಸಿಕೆಗಾಗಿ ಇಂದು ಬೆಳಗ್ಗೆ ಎಂಟು ಗಂಟೆಯಿಂದ ಕಾಯುತ್ತಿದ್ದರು. ಆದರೆ ಆರೋಗ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹನ್ನೊಂದು ಗಂಟೆಯಾದರೂ ಬಂದಿರಲಿಲ್ಲ ಎಂಬ ಮಾಹಿತಿ ಸಾರ್ವಜನಿಕರಿಂದ ಲಭ್ಯವಾಗಿದೆ. 

ನಂತರ ಆರೋಗ್ಯಾಧಿಕಾರಿಗಳು ಆರೋಗ್ಯ ಕೇಂದ್ರಕ್ಕೆ ಆಗಮಿಸಿದರಾದರೂ ಜನರು ತಾ ಮುಂದು ನಾ ಮುಂದು ಎಂದು ಲಸಿಕೆ ಪಡೆಯಲು ಮುಂದಾಗಿದ್ದಾರೆ. ಈ ವೇಳೆ ಅನೇಕರು ಆರೋಗ್ಯಾಧಿಕಾರಿಗಳ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಗ್ರಾಮಸ್ಥರ ಮಾತಿನ ಚಕಮಕಿ ಗಂಭೀರವಾಗುತ್ತಿದ್ದಂತೆ ಪೊಲೀಸರು ಮಧ್ಯ ಪ್ರವೇಶಿಸಿ ಗಲಾಟೆಯನ್ನು ನಿಯಂತ್ರಿಸಿದ್ದಾರೆಂದು ತಿಳಿದುಬಂದಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News