ಪಡಿತರ ಅಕ್ಕಿ ಕಡಿತದ ಬಗ್ಗೆ ಪ್ರಶ್ನಿಸಿದ ವ್ಯಕ್ತಿಗೆ ‘ನೀವು ಸಾಯೋದೆ ಒಳ್ಳೆಯದು' ಎಂದ ಸಚಿವ ಉಮೇಶ್ ಕತ್ತಿ !

Update: 2021-04-28 10:26 GMT

ಬೆಂಗಳೂರು, ಎ. 28: `ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಪಡಿತರ ಕಾರ್ಡ್ ಗಳಿಗೆ ನೀಡುತ್ತಿರುವ ಅಕ್ಕಿಯನ್ನು ಕಡಿತ ಮಾಡಿರುವುದು ಏಕೆ?' ಎಂದು ಪ್ರಶ್ನಿಸಿದ ಫಲಾನುಭವಿಗೆ 'ನೀವು ಸಾಯೋದೆ ಒಳ್ಳೆಯದು' ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಉಮೇಶ್ ಕತ್ತಿ ಹೇಳುವ ಮೂಲಕ ಉದ್ಧಟತನ ಮೆರೆದಿದ್ದಾರೆ.

ಕತ್ತಿ ಅವರು ಈ ಹೇಳಿಕೆಯ ಆಡಿಯೋ ವೈರಲ್ ಆಗಿದೆ. ಈ ಸಂಬಂಧ ಕತ್ತಿ ಅವರ ಬಳಿ ಪ್ರಶ್ನಿಸಿದಾಗ ‘ಅವರ ಹಾಗೇ ಮನಸೋ ಇಚ್ಛೆ ಪ್ರಶ್ನೆ ಕೇಳಿದರೆ ನಾನು ಸತ್ತೋಗಿ ಎಂದು ಹೇಳಿದ್ದೇನೆ. ಅದನ್ನು ಬಿಟ್ಟು ಬೇರೆ ಏನು ಹೇಳಲಿ. ಅವರು ಸಾಯೋದನ್ನು ಬೇಡ ಎಂದು ಹೇಳುವಷ್ಟು ದೊಡ್ಡ ಮನಸು ನನಗಿಲ್ಲ' ಎಂದು ತಮ್ಮ ಹೇಳಿಕೆಯನ್ನು ಕತ್ತಿ ಬಲವಾಗಿ ಸಮರ್ಥಿಸಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರು ನನಗೆ ಉತ್ತಮ ಖಾತೆಯನ್ನು ನೀಡಿದ್ದಾರೆ. ಆದರೆ, ರಾಜ್ಯದಲ್ಲಿ ಯಾರೊಬ್ಬರು ಊಟ ಸಿಗದೆ ಸಾಯಬಾರದು. ಈಗಾಗಲೇ ಎಪ್ರಿಲ್ ತಿಂಗಳ ಅಕ್ಕಿ ಮತ್ತು ರಾಗಿ ವಿತರಣೆ ಮಾಡಲಾಗಿದೆ. ಮೇ ಮತ್ತು ಜೂನ್ ತಿಂಗಳಿಗೆ ಕೇಂದ್ರ ಸರಕಾರ ಗರೀಬ್ ಕಲ್ಯಾಣ ಯೋಜನೆಯಡಿ ತಲಾ 5 ಕೆಜಿ ಅಕ್ಕಿ ನೀಡಲಿದೆ. ಅದನ್ನು ಫಲಾನುಭವಿಗಳಿಗೆ ಕೂಡಲೇ ತಲುಪಿಸುತ್ತೇವೆ ಎಂದು ಉಮೇಶ್ ಕತ್ತಿ ವಿವರಣೆ ನೀಡಿದರು.

ವಿವರಣೆ: ಗದಗ ಜಿಲ್ಲೆ ಕುರ್ತಕೋಟಿ ಗ್ರಾಮದ ರೈತ ಸಂಘ ಕಾರ್ಯಕರ್ತ ಈಶ್ವರ್ ಎಂಬವರು, ಪಡಿತರ ಚೀಟಿದಾರರಿಗೆ ಸರಕಾರ ವಿತರಿಸುತ್ತಿದ್ದ ಅಕ್ಕಿ ಕಡಿತಕ್ಕೆ ಸಂಬಂಧಿಸಿದಂತೆ ಸಚಿವ ಉಮೇಶ್ ಕತ್ತಿ ಅವರಿಗೆ ಕರೆ ಮಾಡಿದ್ದು, ಅಕ್ಕಿ ಕಡಿತ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕತ್ತಿ, ಮುಂದಿನ ತಿಂಗಳಿಂದ 5 ಕೆಜಿ ಅಕ್ಕಿ ಕೊಡಲಾಗುವುದು ಎಂದು ಸ್ಪಷ್ಟನೆ ನೀಡಿದರು.

ರಾಜ್ಯದಲ್ಲಿ ಕೊರೋನ ಕರ್ಫ್ಯೂ ಹೇರಲಾಗಿದೆ. ನೀವು ಅಕ್ಕಿ ಕೊಡುವವರೆಗೂ ಜನ ಉಪವಾಸ ಸಾಯಬೇಕೇ? ಎಂದು ರೈತ ಈಶ್ವರ್ ಪ್ರಶ್ನಿಸಿದ್ದಾರೆ. ಇದಕ್ಕೆ ಸಚಿವ ಉಮೇಶ್ ಕತ್ತಿ, ಸಾಯೋದೆ ಒಳ್ಳೆಯದು, ಅದಕ್ಕೂ ಮೊದಲು ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ನಿಲ್ಲಿಸಿ ಎಂದು ಹೇಳೀದ್ದು, ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ನನಗೆ ಕರೆ ಮಾಡಿದ ವ್ಯಕ್ತಿಗೆ ಪಡಿತರ ಅಕ್ಕಿ ಯೋಜನೆಯ ಬಗ್ಗೆ ವಿವರಣೆ ನೀಡಿದ್ದೇನೆ. ಅವರ ಮನಸೋ ಇಚ್ಛೆ ಪ್ರಶ್ನೆ ಕೇಳಿದರೆ ನಾವು ಏನು ಉತ್ತರ ನೀಡಬೇಕು. `ಸತ್ತು ಹೋಗುವುದಾ ಎಂದರೆ ನಾವು ಸಾಯೋದೆ ಒಳ್ಳೆಯದು' ಎಂದು ಹೇಳಿದ್ದೇನೆ. ಕೇಳುವವರು ಸರಿಯಾಗಿ ಕೇಳಬೇಕು ಎಂದು ಉಮೇಶ್ ಕತ್ತಿ ತಮ್ಮ ಹೇಳಿಕೆಯನ್ನು ಬಲವಾಗಿ ಸಮರ್ಥಿಸಿದ್ದು, ಇದು ದುರಂಹಕಾರದ ಪರಮಾವಧಿ ಎಂದು ಪಡಿತರ ಫಲಾನುಭವಿಗಳು ಟೀಕಿಸಿದ್ದಾರೆ.

ಸಿಎಂ ವಿಷಾದ

ಆಹಾರ ಸಚಿವ ಉಮೇಶ್ ಕತ್ತಿ ರೈತನೊಬ್ಬ 5 ಕೆ.ಜಿ.ಅಕ್ಕಿ ಬದಲಾಗಿ 3 ಕೆ.ಜಿ. ನೀಡುತ್ತಿರುವುದು ಸಾಯಬೇಕಾ, ಬದುಕಾಬೇಕಾ ಎಂದು ಕೇಳಿದಾಗ ಸಾಯಿ ಎಂದು ಒಬ್ಬ ಸಚಿವನಾಗಿ ಸರಿಯಲ್ಲ. ಆ ಭಾಗದಲ್ಲಿರುವ ಜನರಿಗೆ ಗೋಧಿ ಬೇಡವಾದರೆ 5 ಕೆ.ಜಿ. ಅಕ್ಕಿಯನ್ನು ಕೊಡಲು ವ್ಯವಸ್ಥೆ ಮಾಡಲಾಗುವುದು. ಉಮೇಶ್ ಕತ್ತಿ ಅವರ ಹೇಳಿಕೆಗೆ ವಿಷಾದ ವ್ಯಕ್ತಪಡಿಸುತ್ತೇನೆ'

-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News