ಮೂಗಿಗೆ ನಿಂಬೆ ಹಣ್ಣಿನ ರಸ ಹಾಕಿಕೊಂಡ ಬಳಿಕ ಶಿಕ್ಷಕ ಮೃತ್ಯು

Update: 2021-04-28 16:56 GMT

ರಾಯಚೂರು, ಎ.28: ಜಿಲ್ಲೆಯ ಸಿಂಧನೂರಿನ ಶಿಕ್ಷಕರೊಬ್ಬರು 'ನಿಂಬೆಹಣ್ಣಿನ ರಸ' ಹಾಕಿಕೊಳ್ಳುವ ಪ್ರಯೋಗ ಮಾಡಲು ಹೋಗಿ ಬಳಿಕ ಆರೋಗ್ಯದಲ್ಲಿ ಉಂಟಾದ ಏರುಪೇರಿನಿಂದಾಗಿ ಅಸುನೀಗಿದ ಘಟನೆ ವರದಿಯಾಗಿದೆ.

ಮೃತಪಟ್ಟ ಶಿಕ್ಷಕರನ್ನು ಇಲ್ಲಿನ ಸಿಂಧನೂರಿನ ಶರಣ ಬಸವೇಶ್ವರ ಕಾಲನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಬಸವರಾಜ(43) ಎಂದು ಗುರುತಿಸಲಾಗಿದೆ. ಆರೋಗ್ಯವಾಗಿಯೇ ಇದ್ದ ಬಸವರಾಜ ಅವರು ತಮ್ಮ ಮೂಗಿಗೆ ನಾಲ್ಕೈದು ಹನಿ ನಿಂಬೆ ರಸವನ್ನು ಹಾಕಿಕೊಂಡಿದ್ದಾರೆ. ಆ ಬಳಿಕ ಎರಡು ಬಾರಿ ವಾಂತಿ ಮಾಡಿಕೊಂಡಿದ್ದು ಹಠಾತ್ತನೆ ಅವರ ಆರೋಗ್ಯದಲ್ಲಿ ಏರುಪೇರಾಗಿ ಒದ್ದಾಡಿದ್ದಾರೆ. ಕೂಡಲೇ ಅವರನ್ನು ಅಕ್ಕಪಕ್ಕದವರು ಆಸ್ಪತ್ರೆಗೆ ಸಾಗಿಸಿದರಾದರೂ ಅವರು ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಶಿಕ್ಷಕ ಬಸವರಾಜ ಅವರು ಪತ್ನಿ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಸಂಖ್ಯೆ ಬಂಧು-ಮಿತ್ರರನ್ನು ಅಗಲಿದ್ದಾರೆ. ಜಿಲ್ಲೆಯ ಲಿಂಗಸುಗೂರು ತಾಲೂಕಿನ ರಾಮತ್ನಾಳ ಗ್ರಾಮ ಬಸವರಾಜ ಅವರು 2002ರಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ನಿಯೋಜನೆಗೊಂಡಿದ್ದರು ಎಂದು ಅವರ ಆಪ್ತರು ತಿಳಿಸಿದ್ದಾರೆ.

ಉದ್ಯಮಿ ವಿಜಯ್ ಸಂಕೇಶ್ವರ ಅವರು ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ, `ಮೂಗಿನಲ್ಲಿ ನಾಲ್ಕು ಹನಿ ಲಿಂಬೆ ರಸ ಹಾಕುವುದರಿಂದ ಆಕ್ಸಿಜನ್ ಸಮಸ್ಯೆ ನಿವಾರಣೆಯಾಗುತ್ತದೆ' ಎಂದು ಹೇಳಿದ್ದು ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆ ಹಿನ್ನೆಲೆಯಲ್ಲಿ ರಾಜ್ಯದ ಹಲವು ಕಡೆಗಳಲ್ಲಿ ಜನರು ನಿಂಬೆ ಹಣ್ಣಿನ ಸರದ ಸ್ವಯಂ ಪ್ರಯೋಗಕ್ಕೆ ಮುಂದಾಗಿದ್ದಾರೆ. 

'ಮೃತ ಶಿಕ್ಷಕ ಬಸವರಾಜ ಅವರು ಕೆಲ ದಿನಗಳ ಹಿಂದೆಯೆಷ್ಟೆ ತಮ್ಮ ತಂದೆಯನ್ನು ಕಳೆದುಕೊಂಡು ಮಾನಸಿಕವಾಗಿ ಕೊಂಚ ವಿಚಲಿತರಾಗಿದ್ದರು. ಅಲ್ಲದೆ, ಅವರು ಕೊರೋನ ವೈರಸ್ ಸೋಂಕಿನ ಭೀತಿಗೂ ಒಳಗಾಗಿದ್ದರು. ಆ ಹಿನ್ನೆಲೆಯಲ್ಲಿಯೇ ನಿಂಬೆಹಣ್ಣಿನ ಸರ ಮೂಗಿಗೆ ಹಾಕಿಕೊಂಡರೆ ಕೋವಿಡ್-19 ವೈರಸ್ ಸೋಂಕು ಬರುವುದಿಲ್ಲ ಎಂಬ ಮೌಢ್ಯಕ್ಕೆ ಕಟ್ಟುಬಿಟ್ಟು ಪ್ರಯೋಗ ಮಾಡಲು ಹೋಗಿ ಜೀವನ ಹಾನಿ ಮಾಡಿಕೊಂಡಿರುವುದು ದುರಂತದ ಸಂಗತಿ' ಎಂದು ಅವರ ಆಪ್ತ ಶಿಕ್ಷಕರೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News