ಐಎಂಎ ಬಹುಕೋಟಿ ವಂಚನೆ ಪ್ರಕರಣ: ರೋಷನ್ ಬೇಗ್ ವಿರುದ್ಧ ಕೋರ್ಟ್ ಗೆ ಚಾರ್ಜ್‍ಶೀಟ್ ಸಲ್ಲಿಕೆ

Update: 2021-04-28 12:04 GMT

ಬೆಂಗಳೂರು, ಎ.28: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಆರ್.ರೋಷನ್ ಬೇಗ್ ವಿರುದ್ಧ ನಗರದ ವಿಶೇಷ ಕೋರ್ಟ್ ಗೆ ಸಿಬಿಐ ಪೂರಕ ಚಾರ್ಜ್ ಶೀಟ್ ಸಲ್ಲಿಸಿದೆ.

ಐಎಂಎ ಕಂಪೆನಿ ಮಾಲಕ ಮುಹಮ್ಮದ್ ಮನ್ಸೂರ್ ಖಾನ್ ಹಣ ಹೂಡಿಕೆ ಮಾಡಿಸಿಕೊಂಡು ಅಸಲು, ಬಡ್ಡಿ ಹಣವನ್ನೂ ನೀಡದೆ 1 ಲಕ್ಷ ಠೇವಣಿದಾರರಿಂದ 4 ಸಾವಿರ ಕೋಟಿ ರೂಪಾಯಿ ವಂಚಿಸಿದ ಆರೋಪದಡಿ ಸಿಬಿಐ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿತ್ತು. ಇದೇ ಪ್ರಕರಣದಲ್ಲಿ ಐಎಂಎ ಕಂಪೆನಿ ಪರವಾಗಿ ಪ್ರಮೋಟ್ ಮಾಡಲು ರೋಷನ್ ಬೇಗ್ ಹಣ ಪಡೆದು ಚುನಾವಣಾ ವೆಚ್ಚಗಳಿಗೆ ಬಳಸಿಕೊಂಡಿದ್ದಾರೆ, ಅಮಾಯಕರಿಗೆ ಹಣ ಹೂಡಿಕೆ ಮಾಡಲು ಪ್ರಚೋದನೆ ನೀಡಿದ್ದಾರೆ ಎಂಬ ಆರೋಪವಿದೆ.

ಸದ್ಯ ಪ್ರಕರಣದಲ್ಲಿ ರೋಷನ್ ಬೇಗ್ ಅವರನ್ನು 29ನೇ ಆರೋಪಿಯಾಗಿ ಹೆಸರಿಸಲಾಗಿದೆ. ಬಹುಕೋಟಿ ವಂಚನೆ ಪ್ರಕರಣದಲ್ಲಿ ಈಗಾಗಲೇ 33 ಮಂದಿ ಆರೋಪಿಗಳ ವಿರುದ್ಧ 3 ಬಾರಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.

400 ಕೋಟಿ ರೂ.ಹಣ ಪಡೆದ ಆರೋಪದಡಿ ಅದೇ ಹಣದಲ್ಲಿ ರೋಷನ್ ಬೇಗ್ ಹಲವೆಡೆ ಆಸ್ತಿ ಖರೀದಿಸಿದ್ದಾರೆ ಎಂದು ಆರೋಪಿಸಿ, ಕರ್ನಾಟಕ ಠೇವಣಿದಾರರ ಹಿತರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆಸ್ತಿ ಜಪ್ತಿ ಮಾಡಲಾಗಿತ್ತು. 2019 ರಲ್ಲಿ ಐಎಂಎ ಬಹುಕೋಟಿ ವಂಚನೆ ಪ್ರಕರಣ ಬೆಳಕಿಗೆ ಬಂದಿತ್ತು. ಇದರಲ್ಲಿ ಕೆಲ ಹಿರಿಯ ಅಧಿಕಾರಿಗಳ ಹೆಸರು ಸಹ ಕೇಳಿ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News