ತಜ್ಞರ ವರದಿ ಸರಕಾರ ಕಸದ ಬುಟ್ಟಿಗೆ ಹಾಕಿದ್ದ ಪರಿಣಾಮ ಜನರು ಅನುಭವಿಸುತ್ತಿದ್ದಾರೆ: ದಿನೇಶ್ ಗುಂಡೂರಾವ್

Update: 2021-04-28 12:08 GMT

ಬೆಂಗಳೂರು, ಎ. 28: `ಕೋವಿಡ್ ಎರಡನೆ ಅಲೆಯ ಪರಿಣಾಮದ ಬಗ್ಗೆ ನವೆಂಬರ್ ನಲ್ಲಿ ತಜ್ಞರು ಕೊಟ್ಟಿದ್ದ ವರದಿಯನ್ನು ರಾಜ್ಯ ಸರಕಾರ ಕಸದ ಬುಟ್ಟಿಗೆ ಹಾಕಿತ್ತು. ಅದರ ಪರಿಣಾಮವನ್ನು ರಾಜ್ಯದ ಜನ ಈಗ ಅನುಭವಿಸುತ್ತಿದ್ದಾರೆ. ಸರಕಾರ ಅಂದು ತಜ್ಞರ ವರದಿಯನ್ನು ಸ್ವಲ್ಪವೇ ಗಂಭೀರವಾಗಿ ಪರಿಗಣಿಸಿದ್ದರೂ ರಾಜ್ಯ ಇಂತದ್ದೊಂದು ದುರಂತಕ್ಕೆ ಸಾಕ್ಷಿಯಾಗುತ್ತಿರಲಿಲ್ಲ' ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು, `ಕೊರೋನ ಎರಡನೆ ಅಲೆಯ ಪರಿಣಾಮದ ಬಗ್ಗೆ ತಜ್ಞರ ವರದಿಯನ್ನೇ ಕಾಲ ಕಸ ಮಾಡಿಕೊಂಡಿದ್ದ ಈ ಸರಕಾರ ವಿಪಕ್ಷಗಳ ಎಚ್ಚರಿಕೆಯನ್ನು ಪಾಲಿಸಲು ಸಾಧ್ಯವಿತ್ತೆ? ಹೊರುವವನಿಗೆ ಹೆಗಲು ಭಾರ ಎಂಬಂತೆ ಸಿ.ಟಿ.ರವಿಯವರು ನೆಪ ಹೇಳುವುದನ್ನು ಬಿಟ್ಟು ತಮ್ಮ ರಾಜ್ಯ ಸರಕಾರದ ಅಸಮರ್ಥತೆಯನ್ನು ಒಪ್ಪಿಕೊಳ್ಳಲಿ. ಕನಿಷ್ಠ ಆಗಲಾದರೂ ಮಾಡಿದ ಪಾಪದ ಭಾರ ಕಡಿಮೆಯಾಗಬಹುದು' ಎಂದು ಲೇವಡಿ ಮಾಡಿದ್ದಾರೆ.

'ಕೊರೋನ ಭೀಕರತೆಯ ಬಗ್ಗೆ ವಿಪಕ್ಷಗಳು ಆಗಲೇ ಸರಕಾರವನ್ನು ಎಚ್ಚರಿಸಬೇಕಿತ್ತು ಎಂದು ಸಿ.ಟಿ.ರವಿ ಹೇಳಿದ್ದಾರೆ. ಬಿಜೆಪಿ ಸರಕಾರ ವಿಪಕ್ಷಗಳ ಎಚ್ಚರಿಕೆಯನ್ನು ಯಾವಾಗ ಕಿವಿಗೆ ಹಾಕಿಕೊಂಡು ಪಾಲಿಸಿದೆ ಎಂದು ಸಿ.ಟಿ.ರವಿಯವರು ಆತ್ಮಾವಲೋಕನ ಮಾಡಿಕೊಳ್ಳಲಿ. ವಿಪಕ್ಷಗಳ ಎಚ್ಚರಿಕೆ ಅಂದು ಕೂಡ ಸರಕಾರಕ್ಕೆ ಅಪಥ್ಯವಾಗಿತ್ತು, ಇಂದು ಕೂಡ ಅಪಥ್ಯವಾಗಲಿದೆ' ಎಂದು ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.

ರಾಜ್ಯ ಸರಕಾರದ ಪಾಪದ ಫಲವನ್ನು ಜನ ಅನುಭವಿಸಬೇಕಾಗಿರುವುದು ದುರಂತ. ರಾಜ್ಯದಲ್ಲಿ ಆಗುತ್ತಿರುವ ಪ್ರತಿ ಕೊರೋನ ಸಾವಿನ ಹಿಂದೆಯೂ ಸರಕಾರದ ಬೇಜವಾಬ್ದಾರಿಯಿದೆ. ಅಂದು ತಜ್ಞರ ವರದಿ ಕಡೆಗಣಿಸಿ ಹುಡುಗಾಟವಾಡಿದ್ದ ಸರಕಾರ, ಇಂದು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರು ಎಂಬಂತೆ ಕೊರೋನ ನಿಯಂತ್ರಿಸಲು ಹೆಣಗಾಡುವುದರಲ್ಲಿ ಏನರ್ಥವಿದೆ?' ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಎಲ್ಲಿ ಹೋಯಿತು 'ಆತ್ಮ ನಿರ್ಭರ ಭಾರತ'? ಎಲ್ಲಿ ಹೋಯಿತು `ವಿಶ್ವಗುರು ಭಾರತ'? `ಮಾತು ಮನೆ ಕೆಡಿಸಿತು..ತೂತು ಒಲೆ ಕೆಡಿಸಿತು' ಎಂದರೆ ಇದೆ ಅಲ್ಲವೆ? ಮೋದಿಯವರೆ, ನಿಮ್ಮ ಆತ್ಮಪ್ರಶಂಸೆಯ ತೌಡು ಕುಟ್ಟುವ ಪುಕ್ಕಟೆ ಮಾತು ಈ ದೇಶಕ್ಕೆ ಸಾಕಾಗಿದೆ. ಇನ್ನಾದರೂ ಸದೃಢ ಭಾರತ ಕಟ್ಟಲು ಮುಂದಾಗಿ!' ಎಂದು ಮಾಜಿ ಸಚಿವ ದಿನೇಶ್ ಗುಂಡೂರಾವ್ ಇಂದಿಲ್ಲಿ ಸಲಹೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News