×
Ad

ಬಿಎಸ್‌ವೈ ಅವರೇ, ಸೋಂಕನ್ನು ರಾಜ್ಯಾದ್ಯಂತ ಹಬ್ಬಿಸುವ ಹರಕೆಯನ್ನು ಯಾವ ದೇವರಿಗೆ ಹೊತ್ತಿದ್ದೀರಿ?: ಕಾಂಗ್ರೆಸ್‌

Update: 2021-04-28 17:49 IST

ಬೆಂಗಳೂರು, ಎ.28: ರಾಜ್ಯ ಬಿಜೆಪಿ ಸರಕಾರದ ಬೌದ್ಧಿಕ ದಿವಾಳಿತನ ಹಾಗೂ ಪೂರ್ವತಯಾರಿ ಇಲ್ಲದ ಏಕಾಏಕಿಯ ಲಾಕ್‍ಡೌನ್ ಸೋಂಕು ನಿಯಂತ್ರಿಸುವ ಬದಲಿಗೆ ಇನ್ನಷ್ಟು ಹಬ್ಬಿಸಲು ಕಾರಣವಾಗಲಿದೆ. ಹೆಚ್ಚುವರಿಯಾಗಿ ಬಿಎಂಟಿಸಿ ಬಸ್‍ಗಳನ್ನು ಉಪಯೋಗಿಸಿಕೊಂಡು ಶೇ.50ರಷ್ಟು ನಿಯಮ ಪಾಲನೆಯಲ್ಲಿ ಸಾರಿಗೆ ವ್ಯವಸ್ಥೆ ನಿರ್ಮಿಸಬಹುದಿತ್ತು. ಆದರೆ ಸರಕಾರ ಕಂಬಳಿ ಹೊದ್ದು ಮಲಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ಈ ಸಂಬಂಧ ಟ್ವೀಟ್‍ಗಳನ್ನು ಮಾಡಿರುವ ಕಾಂಗ್ರೆಸ್, ಆಶಾ ಕಾರ್ಯಕರ್ತೆಯರನ್ನು ಬಳಸಿಕೊಂಡು ಹಳ್ಳಿಗಳಿಗೆ ತೆರಳಿದವರಿಗೆ ಕಡ್ಡಾಯ ಕ್ವಾರಂಟೈನ್ ಹಾಗೂ ಸೋಂಕು ಪರೀಕ್ಷೆ ನಿಯಮ ರೂಪಿಸಿಲ್ಲ. ನಗರಗಳಲ್ಲಿ, ಕಿಕ್ಕಿರಿದು ತುಂಬಿದ ಬಸ್ಸುಗಳಲ್ಲಿ ಅಂಟಿದ ಸೋಂಕು ಹಳ್ಳಿ ಹಳ್ಳಿಗಳಿಗೆ ತಲುಪಲಿದೆ. ಸೋಂಕನ್ನು ರಾಜ್ಯಾದ್ಯಂತ ಹಬ್ಬಿಸುವ ಹರಕೆಯನ್ನು ಯಾವ ದೇವರಿಗೆ ಹೊತ್ತಿದ್ದೀರಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ? ಎಂದು ಪ್ರಶ್ನಿಸಿದೆ.

ಎಂಟಿಬಿ ನಾಗರಾಜ್ ತಮಗೇ ಬೆಡ್ ಸಿಗ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದರು. ಸಚಿವ ಮಾಧುಸ್ವಾಮಿ ಪ್ರಭಾವಕ್ಕೂ ಬೆಡ್ ಸಿಗಲಿಲ್ಲ. ಮಂತ್ರಿಗಳಿಗೆ ಹೀಗೆ, ಸಾಮಾನ್ಯರ ಇನ್ನೂ ಸ್ಥಿತಿ ಭೀಕರ. ಕಳೆದ ವರ್ಷದ 10,000 ಬೆಡ್‍ಗಳ ಬಿಐಇಸಿ ಕೋವಿಡ್ ಸೆಂಟರ್ ಎಲ್ಲಿ ಹೋಯ್ತು? ಇಷ್ಟೆಲ್ಲ ಸಮಸ್ಯೆ ಇದ್ದರೂ ಅದರ ಬಗ್ಗೆ ತುಟಿ ಬಿಚ್ಚುತ್ತಿಲ್ಲವೇಕೆ ಆರೋಗ್ಯ ಸಚಿವ ಸುಧಾಕರ್? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಯಡಿಯೂರಪ್ಪ ಅವರೇ, ಸುಧಾಕರ್ ಅವರೇ, ಮತ್ತೆ ಮತ್ತೆ ಕೇಳುತ್ತೇವೆ. ಕಳೆದ ವರ್ಷ 10,000 ಹಾಸಿಗೆಗಳ ಕೋವಿಡ್ ಸೆಂಟರನ್ನು ಭಾರಿ ಪ್ರಚಾರಕ್ಕೆ ಮಾತ್ರ ಬಳಸಿಕೊಂಡು ರೋಗಿಗಳಿಗೆ ಬಳಸದೆ ಮುಚ್ಚಿದ್ದೇಕೆ? ಎಷ್ಟು ಕೋಟಿ ಹಣ ವ್ಯರ್ಥ? ಎಷ್ಟು ಲೂಟಿ ಹೊಡೆದಿರಿ? ಬೆಡ್ ಸಮಸ್ಯೆ ಬಗೆಹರಿಸಲು ಇದುವರೆಗೆ ಯಾವುದೇ ಕಾರ್ಯಸೂಚಿ ಇಲ್ಲದಿರುವುದೇಕೆ? ಎಂದು ಕಾಂಗ್ರೆಸ್ ಕೇಳಿದೆ.

ವೈದ್ಯಕೀಯ ವ್ಯವಸ್ಥೆಯಿಂದ ಹಿಡಿದು ಅಂತ್ಯಕ್ರಿಯೆ ವ್ಯವಸ್ಥೆಯವರೆಗೂ ಪರಿಸ್ಥಿತಿ ದಿನದಿನಕ್ಕೂ ಬಿಗಡಾಯಿಸುತ್ತಿದೆ, ಇಷ್ಟಾದರೂ ಸರಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಯಡಿಯೂರಪ್ಪ ಅವರೇ, ಬೆಡ್, ಆಕ್ಸಿಜನ್, ರೆಮ್‍ಡಿಸಿವಿರ್, ಲಸಿಕೆ ಹೀಗೆ ಪ್ರತಿಯೊಂದಕ್ಕೂ ಸಚಿವರ ಟಾಸ್ಕ್ ಫೋರ್ಸ್ ಗಳನ್ನು ರಚಿಸಿ ಜವಾಬ್ದಾರಿ ನೀಡಲು ಕೊಡಲು ಏಕೆ ಹಿಂಜರಿಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ರಾಜ್ಯ ಬಿಜೆಪಿ ನಿಮ್ಮದು ಸೂಟ್ ಬೂಟಿನ ಸರಕಾರವೆನ್ನುವುದನ್ನ ಮತ್ತೆ ಮತ್ತೆ ಸಾಬೀತು ಮಾಡುತ್ತಿದ್ದಿರಿ. ತಾಂತ್ರಿಕ ಅರಿವು, ಸ್ಮಾರ್ಟ್ ಫೋನ್ ಇಲ್ಲದ ಜನರ ಸಂಖ್ಯೆ ದೊಡ್ಡದಿದೆ, ನಿಮ್ಮ ಈ ಟೆಕ್ನಾಲಜಿ ಬದಿಗಿಟ್ಟು ಪಲ್ಸ್ ಪೋಲಿಯೋ ಮಾದರಿಯಲ್ಲಿ ಪ್ರತಿ ಮನೆಗೂ ಲಸಿಕೆ ತಲುಪಿಸುವ ಕ್ರಮ ಕೈಗೊಳ್ಳಿ ಯಡಿಯೂರಪ್ಪ ಅವರೇ ಎಂದು ಕಾಂಗ್ರೆಸ್ ಆಗ್ರಹಿಸಿದೆ.

‘ಕೋವಿನ್ ಸರ್ವರ್ ಡೌನ್’ ದೇಶದಲ್ಲಿ ನೆಟ್ವರ್ಕ್ ಇಲ್ಲದ ಪ್ರದೇಶಗಳು ಹಲವು. ಸ್ಮಾರ್ಟ್ ಫೋನ್ ಇಲ್ಲದ ಜನ, ತಾಂತ್ರಿಕ ಮಾಹಿತಿಯೂ ಇಲ್ಲದವರನ್ನು ಈ ಸರಕಾರ ಗಮನದಲ್ಲಿ ಇಟ್ಟುಕೊಂಡಂತಿಲ್ಲ. ಮೋದಿ ಮುಖ ತೋರಿಸಲೆಂದು ಆನ್‍ಲೈನ್ ಮೂಲಕವೆ ಲಸಿಕೆಗೆ ಅವಕಾಶ ನೀಡುವಂತ ದುಷ್ಟ ಬುದ್ದಿ ಹೊಂದಿರುವ ಸರಕಾರದಿಂದ ಇಂತಹ ಸವಾಲುಗಳಿಗೆ ಯಾವ ಪರಿಹಾರ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News