×
Ad

ರಾಜ್ಯದ ನ್ಯಾಯಾಲಯಗಳಿಗೆ ಕೊರೋನ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದ ಹೈಕೋರ್ಟ್

Update: 2021-04-28 17:59 IST

ಬೆಂಗಳೂರು, ಎ.28: ರಾಜ್ಯದಲ್ಲಿ ಕೊರೋನ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ನ್ಯಾಯಾಲಯಗಳಿಗೆ ಹಾಗೂ ರಾಜ್ಯದ ಇತರೆ ನ್ಯಾಯಾಲಯಗಳಿಗೆ ಪರಿಷ್ಕೃತ ಮಾರ್ಗಸೂಚಿಗಳನ್ನು ಜಾರಿ ಮಾಡಿದೆ.

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಿಗೆ: ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳು(ಸಿವಿಲ್-ಕ್ರಿಮಿನಲ್) ಪ್ರಕರಣಗಳಿಗೆ ಸಂಬಂಧಿಸಿದ ಸಾಕ್ಷ್ಯ ದಾಖಲಿಸಲು ವಿಡಿಯೋ ಕಾನ್ಫರೆನ್ಸ್ ಸೌಲಭ್ಯ ಬಳಸಿಕೊಳ್ಳಬೇಕು. ಸುಪ್ರೀಂ ಕೋರ್ಟ್, ಹೈಕೋರ್ಟ್ ಪೀಠಗಳು ಸಾಕ್ಷ್ಯ ದಾಖಲಿಸಲು ನಿರ್ದೇಶಿಸಿದ್ದರೆ ಮಾತ್ರ. ನ್ಯಾಯಾಲಯಕ್ಕೆ ಅಗತ್ಯವೆನ್ನಿಸಿದರೆ ನೇರ ಹಾಜರಿ ಮೂಲಕವೂ ಮಾಡಬಹುದು.

ಪೊಲೀಸ್ ಅಧಿಕಾರಿಗಳು ಹಾಗೂ ಆರೋಪಿಗಳನ್ನು ಹೊರತುಪಡಿಸಿ ಕಕ್ಷಿದಾರರಿಗೆ ನ್ಯಾಯಾಲಯ ಪ್ರವೇಶ ನಿಷಿದ್ಧ. ನ್ಯಾಯಾಂಗ ಬಂಧನಕ್ಕೆ ಒಳಪಡಿಸುವ ಆರೋಪಿಗಳನ್ನ ವಿಸಿ ಮೂಲಕವೇ ಹಾಜರುಪಡಿಸುವುದು.

ಜಾಮೀನು ಪಡೆದಿರುವ ಆರೋಪಿಗಳು ಹಾಗೂ ವಕೀಲರ ಗೈರು ಹಾಜರಿಯಲ್ಲಿ ನ್ಯಾಯಾಲಯಗಳು ಪ್ರತಿಕೂಲ ಆದೇಶಗಳನ್ನು ಮಾಡುವಂತಿಲ್ಲ. ರಜಾ ಕಾಲದ ನ್ಯಾಯಾಲಯಗಳು ತುರ್ತು ಪ್ರಕರಣಗಳನ್ನಷ್ಟೇ ವಿಸಿ ಮೂಲಕ ವಿಚಾರಣೆ ನಡೆಸುವುದು.

ನಗರದ ಗುರುನಾನಕ್ ಭವನದಲ್ಲಿರುವ ರಿಮ್ಯಾಂಡ್ ಕೋರ್ಟ್ ಮೇ 29ರಿಂದ ಕಾರ್ಯಾರಂಭಿಸುವುದು. ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್‍ಗಳು ಶೇ.50ರಷ್ಟು ನ್ಯಾಯಾಂಗ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ರೊಟೇಷನ್ ಕ್ರಮದಲ್ಲಿ ಕಾರ್ಯನಿರ್ವಹಿಸಬೇಕು.

ಸಿಎಂಎಂ ಹಾಗೂ ಎಸಿಎಂಎಂ ಕೋರ್ಟ್‍ಗಳು ಗುರುನಾನಕ್ ಭವನದ ರಿಮ್ಯಾಂಡ್ ಕೋರ್ಟ್‍ನಲ್ಲಿ ಆರೋಪಿಗಳನ್ನು ನೇರವಾಗಿ ಹಾಜರುಪಡಿಸಿಕೊಂಡು ವಿಚಾರಣೆ ನಡೆಸುವುದು.

ರಾಜ್ಯದ ಇತರೆ ನ್ಯಾಯಾಲಯಗಳಿಗೆ ಮಾರ್ಗಸೂಚಿ: ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ಸಾಕ್ಷ್ಯ ದಾಖಲಿಸಲು ವಿಡಿಯೋ ಕಾನ್ಫರೆನ್ಸ್ ಬಳಸುವುದು. ಸುಪ್ರೀಂ ಕೋರ್ಟ್, ಹೈಕೋರ್ಟ್ ಪೀಠಗಳು ಸಾಕ್ಷ್ಯ ದಾಖಲಿಸಲು ನಿರ್ದೇಶಿಸಿದ್ದರೆ ಮಾತ್ರ. ನ್ಯಾಯಾಲಯಕ್ಕೆ ಅಗತ್ಯವೆನ್ನಿಸಿದರೆ ನೇರ ಹಾಜರಿ ಮೂಲಕವೂ ಮಾಡಬಹುದು.

ಪೊಲೀಸ್ ಅಧಿಕಾರಿಗಳು ಹಾಗೂ ಆರೋಪಿಗಳನ್ನು ಹೊರತುಪಡಿಸಿ ಕಕ್ಷೀದಾರರಿಗೆ ನ್ಯಾಯಾಲಯ ಪ್ರವೇಶ ನಿಷಿದ್ಧ. ನ್ಯಾಯಾಂಗ ಬಂಧನಕ್ಕೆ ಒಳಪಡಿಸುವ ಆರೋಪಿಗಳನ್ನ ವಿಸಿ ಮೂಲಕವೇ ಹಾಜರುಪಡಿಸುವುದು.

ಜಾಮೀನು ಪಡೆದಿರುವ ಆರೋಪಿಗಳು ಹಾಗೂ ವಕೀಲರ ಗೈರು ಹಾಜರಿಯಲ್ಲಿ ನ್ಯಾಯಾಲಯಗಳು ಪ್ರತಿಕೂಲ ಆದೇಶಗಳನ್ನು ಮಾಡುವಂತಿಲ್ಲ. ಪ್ರಧಾನ ಜಿಲ್ಲಾ ನ್ಯಾಯಾಧೀಶರು ಆರೋಪಿಗಳನ್ನು ಹಾಜರುಪಡಿಸಲು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಖಾಲಿ ಇರುವ ಪ್ರತ್ಯೇಕ ಕೋರ್ಟ್ ಹಾಲ್ ಗಳನ್ನು ಬಳಸಿಕೊಳ್ಳುವುದು. 2021ರ ಮೇ ಕೊನೆಯವರಗೆ ಚುನಾವಣೆ ನಡೆಸದಂತೆ ವಕೀಲರ ಸಂಘಗಳಿಗೆ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಸೂಚಿಸುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News