×
Ad

ಕೊರೋನ ಕರ್ಫ್ಯೂ: ವಕೀಲರ ಸಂಚಾರಕ್ಕೆ ಅನುಮತಿಸಿದ ಸರಕಾರ

Update: 2021-04-28 18:30 IST

ಬೆಂಗಳೂರು, ಎ.28: ಕೊರೋನ ಕರ್ಫ್ಯೂ ಅವಧಿಯಲ್ಲಿ ವಕೀಲರು ತಮ್ಮ ಕಚೇರಿಗೆ ಹೋಗಿ ಬರಲು ಸರಕಾರ ಅನುಮತಿ ನೀಡಿದ್ದು, ಇದನ್ನು ವಕೀಲರು ಸದ್ಬಳಕೆ ಮಾಡಿಕೊಳ್ಳಬಹುದು ಎಂದು ಬೆಂಗಳೂರು ವಕೀಲರ ಸಂಘದ(ಎಎಬಿ) ಅಧ್ಯಕ್ಷ ಎ.ಪಿ. ರಂಗನಾಥ್ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಎ.ಪಿ.ರಂಗನಾಥ್ ಅವರು, ಕೊರೋನ ಕರ್ಫ್ಯೂ ಅವಧಿಯಲ್ಲಿ ವಕೀಲರು ತಮ್ಮ ಕಾರ್ಯ ನಿಮಿತ್ತ ಕಚೇರಿಗೆ, ನ್ಯಾಯಾಲಯಗಳಿಗೆ ಹೋಗಿ ಬರುವುದಕ್ಕೆ ರಾಜ್ಯ ಸರಕಾರ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸಮ್ಮತಿಸಿದ್ದಾರೆ. ಹೀಗಾಗಿ, ರಾಜ್ಯ ವಕೀಲರ ಪರಿಷತ್ತು ಅಥವಾ ಬೆಂಗಳೂರು ವಕೀಲರ ಸಂಘ ನೀಡಿರುವ ಐಡಿ ಕಾರ್ಡ್‍ಗಳನ್ನು ತೋರಿಸಿ ಸಂಚರಿಸಬಹುದು. ಇದನ್ನು ವಕೀಲರು ಸದ್ಬಳಕೆ ಮಾಡಿಕೊಳ್ಳಬೇಕು. ಹಾಗೆಂದು ಅನಗತ್ಯವಾಗಿ ಓಡಾಡಬಾರದು. ಅಗತ್ಯವಿಲ್ಲದ ಸಂದರ್ಭದಲ್ಲಿ ವಕೀಲರು ಮನೆಗಳಲ್ಲೇ ಉಳಿದು ಸರಕಾರ ನಡೆಸುತ್ತಿರುವ ಕೋವಿಡ್ ವಿರುದ್ಧದ ಹೋರಾಟಕ್ಕೆ ಸಹಕಾರ ನೀಡಬೇಕು ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಬೆಂಗಳೂರು ವಕೀಲರ ಸಂಘ ನ್ಯಾಯವಾದಿಗಳ ಸಂಚಾರಕ್ಕೆ ಅನುಮತಿ ಕೋರಿ ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿತ್ತು. ಪತ್ರದಲ್ಲಿ ಕೋವಿಡ್ ನಿಯಂತ್ರಿಸುವ ಹಿನ್ನೆಲೆಯಲ್ಲಿ ಸರಕಾರ ಎ.27ರಿಂದ ಎರಡು ವಾರಗಳ ಕಾಲ ಕರ್ಫ್ಯೂ ಜಾರಿಗೆ ಆದೇಶಿಸಿದೆ. ಆ ಬಳಿಕ ಎ.27ರಂದು ಹೈಕೋರ್ಟ್ ನ್ಯಾಯಾಲಯಗಳ ಕಲಾಪಕ್ಕೆ ಸಂಬಂಧಿಸಿದಂತೆ ಎಸ್‍ಒಪಿ ಹೊರಡಿಸಿದ್ದು, ವರ್ಚುಯಲ್ ಕೋರ್ಟ್ ನಡೆಸುವಂತೆ ನಿರ್ದೇಶಿಸಿದೆ. ವಕೀಲರು ವಿಸಿ ಮೂಲಕ ಕೋರ್ಟ್ ಕಲಾಪದಲ್ಲಿ ಭಾಗವಹಿಸಲು ಕಚೇರಿಯಲ್ಲಿಯೇ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ವಕೀಲರು ಕೆಲಸ ಕಾರ್ಯಗಳಿಗಾಗಿ ತಮ್ಮ ಕಚೇರಿಗೆ ಹಾಗೂ ನ್ಯಾಯಾಲಯಗಳಿಗೆ ಹೋಗಿ ಬರುವ ಅನಿವಾರ್ಯತೆ ಇದೆ. ವಕೀಲರು ಕೂಡ ನ್ಯಾಯಾಂಗ ವ್ಯವಸ್ಥೆಯ ಭಾಗವಾಗಿದ್ದು, ಅವರಿಗೆ ಓಡಾಡಲು ಸಮ್ಮತಿಸಬೇಕು. ಹೀಗಾಗಿ, ರಾಜ್ಯ ವಕೀಲರ ಪರಿಷತ್ತು ಅಥವಾ ಬೆಂಗಳೂರು ವಕೀಲರ ಸಂಘ ನೀಡಿರುವ ಐಡಿ ಕಾರ್ಡ್ ಪರಿಶೀಲಿಸಿ ಸಂಚರಿಸಲು ಅವಕಾಶ ಮಾಡಿಕೊಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದರು. ಜತೆಗೆ ಈಗಾಗಲೇ ಲಾಕ್ ಡೌನ್ ಜಾರಿ ಮಾಡಿರುವ ಹೊಸದಿಲ್ಲಿ ಸರಕಾರ ಕೂಡ ಇದೇ ಕ್ರಮ ಅನುಸರಿಸಿದೆ ಎಂದು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News